

ಲಖನೌ: ವೇಗವಾಗಿ ಬಂದ ಟ್ರಕ್ ಒಂದು ಕನ್ವಾರ್ ಯಾತ್ರಿಗಳಿದ್ದ ಗುಂಪಿನ ಕಡೆ ನುಗ್ಗಿದ ಪರಿಣಾಮ ಸ್ಥಳದಲ್ಲೇ 6 ಮಂದಿ ದುರಂತ ಸಾವಿಗೀಡಾಗಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಬಧಾರ್ ಗ್ರಾಮದ ಬಳಿಯಿರುವ ಹತ್ರಾಸ್-ಆಗ್ರಾ ರಸ್ತೆಯಲ್ಲಿ ಶನಿವಾರ ನಡೆದಿದೆ.
ಕನ್ವಾರ್ ಯಾತ್ರಿಗಳೆಲ್ಲರೂ ಮಧ್ಯಪ್ರದೇಶದ ಗ್ವಾಲಿಯರ್ ಮೂಲದವರು. ಈ ಘಟನೆ ಶನಿವಾರ ತಡರಾತ್ರಿ 2.15 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 93ರಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸಲಾಗಿ. ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗೆ ಆಗ್ರಾ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕನ್ವಾರ್ ಯಾತ್ರೆಯನ್ನು ಮುಗಿಸಿದ ಒಂದು ಗುಂಪು ಹರಿದ್ವಾರದಿಂದ ಗ್ವಾಲಿಯರ್ಗೆ ಮರಳುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಆಗ್ರಾ ವಲಯದ ಎಡಿಜಿ ರಾಜೀವ್ ಕೃಷ್ಣ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿರುವ ಸಾದಾಬಾದ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಟ್ರಕ್ ಚಾಲಕನ ಬಗ್ಗೆ ನಮಗೆ ಮಾಹಿತಿ ದೊರೆತಿದ್ದು, ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ರಾಜೀವ್ ಕೃಷ್ಣ ಭರವಸೆ ನೀಡಿದ್ದಾರೆ. (ಏಜೆನ್ಸೀಸ್)