16 ವರ್ಷದ ಹಿಂದು ಹುಡುಗಿ ಅಪಹರಿಸಿ ಮುಸ್ಲಿಂ ವ್ಯಕ್ತಿಯ ಜತೆ ಬಲವಂತದ ಮದ್ವೆ: ಪಾಕ್​ನಲ್ಲಿ ಹಿಂದುಗಳ ಪ್ರತಿಭಟನೆ

Hindu Girl
Published on

ಲಾಹೋರ್​: ಪಾಕಿಸ್ತಾನದಲ್ಲಿ ಹಿಂದುಗಳು ಮೇಲಿನ ದೌರ್ಜನ್ಯಕ್ಕೆ ಕೊನೆ ಎಂಬುದಿಲ್ಲವೆ? ಈ ರೀತಿಯ ಆತಂಕದ ವಾತಾವರಣ ಅಲ್ಲಿ ನಿರ್ಮಾಣವಾಗಿದೆ. ಏಕೆಂದರೆ, ಹಿಂದುಗಳ ಮೇಲಿನ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಲೇ ಇದೆ.

ತಾಜಾ ಬೆಳವಣಿಗೆ ಒಂದರಲ್ಲಿ 16 ವರ್ಷದ ಹಿಂದು ಹುಡುಗಿಯನ್ನು ಅಪಹರಿಸಿ, ಬಲವಂತವಾಗಿ ಮುಸ್ಲಿಂ ವ್ಯಕ್ತಿಯ ಜತೆ ಮದುವೆ ಮಾಡಿರುವ ಘಟನೆ ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಿಂದ ವರದಿಯಾಗಿದೆ. ಅಪಹರಣದ ಬಳಿಕ ಹುಡುಗಿಯನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿರುವ ಆರೋಪ ಕೇಳಿಬಂದಿದೆ.

ಈ ಘಟನೆ ಬೆನ್ನಲ್ಲೇ ಹಿಂದು ಸಮುದಾಯವು ನವಾಬ್ಷಾದಲ್ಲಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್​ ಅಲಿ ಜರ್ದಾರಿ ಮನೆಯ ಮುಂದೆ ಪ್ರತಿಭಟನೆ ನಡೆಸಿ, ನೆರವು ನೀಡುವಂತೆ ಕೋರಿದ್ದಾರೆ. ಪಾಕ್​ ಪತ್ರಿಕೆ ಡಾನ್​ ವರದಿ ಪ್ರಕಾರ ಒಂದು ವಾರದ ಹಿಂದೆ ಸಿಂಧ್​ ಪ್ರಾಂತ್ಯದ ಖಾಜಿ ಅಹ್ಮೆದ್​ನಿಂದ ಹುಡುಗಿಯನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿದೆ.

ಹಿಂದುಗಳ ಮೇಲಿನ ದೌರ್ಜನ್ಯ ಪಾಕ್​ನಲ್ಲಿ ಸರ್ವೆ ಸಾಮಾನ್ಯವಾಗಿದೆ. ಈ ಬಗ್ಗೆ ಈಗಾಗಲೇ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಭಾರತೀಯ ಪ್ರತಿನಿಧಿ ಧ್ವನಿ ಎತ್ತಿದ್ದಾರೆ. ‘ಪಾಕಿಸ್ತಾನದಲ್ಲಿ ಸಾವಿರಾರು ಸಿಖ್ಖರು, ಹಿಂದುಗಳು ಮತ್ತು ಕ್ರೈಸ್ತ ಅಲ್ಪಸಂಖ್ಯಾತ ಮಹಿಳೆಯರು ಹಾಗೂ ಹುಡುಗಿಯರು ಅಪಹರಣಕ್ಕೆ ಒಳಗಾಗುತ್ತಿದ್ದಾರೆ. ಅವರನ್ನು ಮತಾಂತರ ಮಾಡಿ ಬಲವಂತದ ಮದುವೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net