ಸರ್ಕಾರದ ನೀತಿ ಪ್ರಶ್ನಿಸುವುದು ರಾಷ್ಟ್ರದ್ರೋಹ ಎನಿಸುವುದಿಲ್ಲ: ಸುಪ್ರೀಂಕೋರ್ಟ್

supreme court
supreme court
Published on

ನವದೆಹಲಿ: ಸರ್ಕಾರದ ನೀತಿ, ನಿರ್ಧಾರ ಗಳನ್ನು ವಿರೋಧಿಸುವುದು ಅಥವಾ ಅಸಮ್ಮತಿ ವ್ಯಕ್ತಪಡಿಸುವುದನ್ನು ರಾಷ್ಟ್ರದ್ರೋಹ ಎನ್ನಲಾಗದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ನ್ಯಾಷನಲ್ ಕಾನ್ಪರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿಕೆ ನೀಡಿದ್ದರು. ಇದನ್ನು ರಜತ್ ಶರ್ಮಾ ಮತ್ತು ನೇಹ್ ಶ್ರೀವಾಸ್ತವ ಎಂಬುವವರು ಪ್ರಶ್ನಿಸಿ, ಅಬ್ದುಲ್ಲಾ ವಿರುದ್ಧ ರಾಷ್ಟ್ರದ್ರೋಹದ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್​ನ ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ. ಹೇಮಂತ ಗುಪ್ತಾ, ಸರ್ಕಾರದ ನಿಲುವುಗಳಿಗೆ ವ್ಯತಿರಿಕ್ತವಾಗಿರುವ ಹೇಳಿಕೆ ನೀಡುವುದನ್ನು ರಾಷ್ಟ್ರದ್ರೋಹ ಎಂದು ಹೇಳಲಾಗದು ಎಂದು ಅಸಮಾಧಾನ ವ್ಯಕ್ತಪಡಿಸಿ 50 ಸಾವಿರ ದಂಡ ರೂ. ಕಟ್ಟುವಂತೆ ಅರ್ಜಿದಾರರಿಗೆ ಸೂಚನೆ ನೀಡಿತು.

83 ವರ್ಷದ ಫಾರೂಕ್ ಅಬ್ದುಲ್ಲಾ ದೇಶ ವಿರೋಧಿ ಆಗಿದ್ದು, ಅವರನ್ನು ಸಂಸದ ಸ್ಥಾನದಲ್ಲಿ ಮುಂದುವರಿಸಿದರೆ ಭಾರತದಲ್ಲಿ ದೇಶ ವಿರೋಧಿಗಳಿಗೆ ಸಮ್ಮತಿ ಇದೆ ಎಂಬ ಸಂದೇಶ ರವಾನಿಸಿದಂತಾ ಗುತ್ತದೆ. ಇದು ದೇಶದ ಐಕ್ಯತೆಗೂ ಧಕ್ಕೆ ತರಲಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ದೂರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net