

ನವದೆಹಲಿ: ಬರುವ ಭಾನುವಾರ(ಮಾ.8) ನಾನು ನನ್ನ ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ನೀವು ಸಾಮಾಜಿಕ ಜಾಲತಾಣವನ್ನು ಬಿಡುವುದಲ್ಲ, ದ್ವೇಷವನ್ನು ಬಿಡಿ ಎಂದು ಹೇಳಿದ್ದರು.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪ್ರಧಾನಿ ಮೋದಿಯವರ ಟ್ವೀಟ್ಗೆ ಇಂದು ಅವರೇ ಉತ್ತರ ನೀಡಿ, ಸಾಧನ ಮಹಿಳೆಯರಿಗೆ ಮೀಸಲಾಗಿಡುವ ಕಾರಣಕ್ಕೆ ನಾನು ಮಾ.8ರಂದು ಸೋಷಿಯಲ್ ಮೀಡಿಯಾ ಉಪಯೋಗಿಸುತ್ತಿಲ್ಲ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿಯವರ ಈ ಟ್ವೀಟ್ಗೂ ರಾಹುಲ್ ಗಾಂಧಿ ಕಟು ಪ್ರತಿಕ್ರಿಯೆ ನೀಡಿದ್ದಾರೆ. ಕೊರೊನಾ ವೈರಸ್ ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
ಪ್ರೀತಿಯ ಪ್ರಧಾನಿ ಮೋದಿಯವರೇ, ಇಡೀ ಭಾರತಕ್ಕೆ ಕೊರೊನಾ ವೈರಸ್ನಂತಹ ತುರ್ತು ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ನಿಮ್ಮ ಸಾಮಾಜಿಕ ಜಾಲತಾಣಗಳನ್ನು ಮುಂದಿಟ್ಟುಕೊಂಡು ತಮಾಷೆ ಮಾಡುತ್ತ, ಆಟವಾಡುತ್ತ ಸಮಯ ಹಾಳು ಮಾಡಬೇಡಿ. ಭಾರತದಲ್ಲಿ ಕೊರೊನಾ ವೈರಸ್ ತಡೆ, ನಿಯಂತ್ರಣದ ಬಗ್ಗೆ ಗಮನಹರಿಸಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪ್ರತಿ ದೇಶಕ್ಕೂ ಅದರ ನಾಯಕರನ್ನು ಪರೀಕ್ಷೆಗೆ ಒಡ್ಡುವ ಸಂದರ್ಭ ಎದುರಾಗುತ್ತದೆ. ಈಗ ಭಾರತದ ಎದುರು ಅದೇ ಸನ್ನಿವೇಶ ಇದೆ. ನಿಜವಾದ ನಾಯಕನಾದವನು ಈಗ ಭಾರತ ಹಾಗೂ ಅದರ ಆರ್ಥಿಕತೆಗೆ ತಗುಲಿರುವ ವೈರಸ್ನ್ನು ತೊಲಗಿಸುವತ್ತ ಸಂಪೂರ್ಣ ಗಮನಹರಿಸುತ್ತಾನೆ ಎಂದು ರಾಹುಲ್ ಗಾಂಧಿ ಇನ್ನೊಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿಯವರು ಈ ಟ್ವೀಟ್ ಮಾಡುವುದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ದೇಶದ ಜನರಲ್ಲಿ ಧೈರ್ಯ ತುಂಬಿದ್ದಾರೆ. ಯಾರೂ ಹೆದರುವುದು ಬೇಡ, ಕೊರೊನಾ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡೋಣ. ಸರ್ಕಾರದಿಂದ ಸಕಲ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಫೆ.12ರಂದು ಕೂಡ ರಾಹುಲ್ ಗಾಂಧಿಯವರು ಕೊರೊನಾ ವೈರಸ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ವೈರಸ್ ನಮ್ಮ ದೇಶ ಹಾಗೂ ಅದರ ಆರ್ಥಿಕತೆ ಮೇಲೆ ತುಂಬ ಅಪಾಯಕಾರಿಯಾಗಿ ಪರಿಣಾಮವನ್ನು ಬೀರುತ್ತಿದೆ. ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದೆನಿಸುತ್ತಿದೆ ಎಂದು ಹೇಳಿದ್ದರು. (ಏಜೆನ್ಸೀಸ್)