545 ಪಿಎಸ್‌ಐ ಹುದ್ದೆ ನೇಮಕ ಸಮಸ್ಯೆಗೆ ಶೀಘ್ರ ಪರಿಹಾರ: ಡಾ.ಪರಮೇಶ್ವರ

Parameswar Crime11
Published on

ಬೆಂಗಳೂರು: ಲಿಖಿತ ಪರೀಕ್ಷೆ ಮುಗಿದಿರುವ 545 ಪಿಎಸ್‌ಐ ಹುದ್ದೆ ನೇಮಕ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಕುರಿತು ಕೋರ್ಟ್‌ಗಳಿಗೆ ಹೋಗಿ ಆದೇಶಗಳನ್ನು ತಂದಾಗ ನಮ್ಮ ಕೈ ಕಟ್ಟಿ ಹಾಕಿದಂತಾಗುತ್ತದೆ. 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಆದೇಶಗಳನ್ನು ಕೊಡಬೇಕು ಎಂಬ ಉದ್ದೇಶದಿಂದ ಪರೀಕ್ಷೆ ಪೂರ್ಣಗೊಳಿಸಿದ್ದೇವೆ. ಈ ಹಂತದಲ್ಲಿಯೇ ಯಾರೋ ಕೋರ್ಟ್‌ಗೆ ಹೋಗುತ್ತಾರೆ. ಹಾಗಾಗಿ ವಿಳಂಬವಾಗುತ್ತಿದೆ ಎಂದು ಹೇಳಿದರು.

ಅಂತರ ಜಿಲ್ಲಾ ವರ್ಗಾವಣೆ

ಪೊಲೀಸರ ಅಂತರ ಜಿಲ್ಲಾ ವರ್ಗಾವಣೆ ಪೋರ್ಟಲ್ ಅರ್ಜಿ ಪ್ರಕಾರ ಆಗುತ್ತಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಶಿಸ್ತು ಬದ್ಧವಾಗಿ ನಿಯಮದ ಚೌಕಟ್ಟಿನಲ್ಲಿ ನಡೆಯಬೇಕಾಗುತ್ತದೆ ಎಂದು ಹೇಳಿದರು.

ವರ್ಗಾವಣೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಮಾಡಿದ್ದಾರೆ. ಅದನ್ನು ಮೀರಿ ವರ್ಗಾವಣೆ ಮಾಡಲು ಬರುವುದಿಲ್ಲ. ಅಕಸ್ಮಾತ್ ಮಾಡಬೇಕಾದರೆ ನಿಯಮಗಳನ್ನು ಬದಲಾಯಿಸಬೇಕಾಗುತ್ತದೆ ಎಂದರು.

ನಿಯಮ ಉಲ್ಲಂಸಿ ವರ್ಗಾವಣೆ ಇಲ್ಲ

ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಒಂದು ವರ್ಷದ ನಿಯಮವಿತ್ತು. ಸದನದಲ್ಲಿ ಕಾನೂನು ಬದಲಾಯಿಸಿ ಎರಡು ವರ್ಷ ಮಾಡಲಾಗಿದೆ. ಈ ರೀತಿ ಕಾನೂನು ಬದಲಾವಣೆ ಮಾಡಬಹುದು. ಇರುವಂತಹ ನಿಯಮ ಉಲ್ಲಂಘನೆ ಮಾಡಿ ವರ್ಗಾವಣೆ ಮಾಡುವುದಕ್ಕೆ ಅವಕಾಶವಿಲ್ಲ. ಡಿಜಿ ಅವರಾಗಲಿ, ನಾನು ಅಥವಾ ಮತ್ತೊಬ್ಬರು ಇರಬಹುದು. ಕಾನೂನು, ನಿಯಮದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ವರ್ಗವಾಣೆಗೆ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿರುವುದಕ್ಕೆ ಏನಾದರು ಸಣ್ಣಪುಟ್ಟ ತೊಂದರೆ ಆಗಿದ್ದರೆ ಸರಿಪಡಿಸುವುದಕ್ಕೆ ಸೂಚನೆ ನೀಡುಡುತ್ತೇನೆ ಎಂದು ಹೇಳಿದರು.

ಕಾನೂನು ಎಲ್ಲರಿಗೂ ಒಂದೆ

ನಟ ದರ್ಶನ್ ಪ್ರಕರಣದಿಂದ ಬಚಾವ್ ಆಗಲು ಪ್ರಭಾವಿ ರಾಜಕಾರಣಿಯಿಂದ ಪ್ರಯತ್ನ ಮಾಡಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನನಗೆ ಗೊತ್ತಿರುವಂತೆ ಯಾರು ಸಹ ಪ್ರಯತ್ನ ಮಾಡಿಲ್ಲ. ಕಾನೂನಿನಲ್ಲಿ ಏನ್ಲೆ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಅದನ್ನು ಪೊಲೀಸರು ಮಾಡುತ್ತಾರೆ. ಇದರಲ್ಲಿ ಸರ್ಕಾರದಿಂದ ನಾವ್ಯಾರು ಮಧ್ಯ ಪ್ರವೇಶಿಸುವುದಿಲ್ಲ. ಮುಕ್ತವಾಗಿ ತನಿಖೆ ನಡೆಸಲು ಪೊಲೀಸರಿಗೆ ಅವಕಾಶವಿದೆ ಎಂದು ತಿಳಿಸಿದರು.

ಪ್ರಕರಣ ಸಿಬಿಐಗೆ ವಹಿಸುವ ಅಗತ್ಯವಿಲ್ಲ

ಕೊಲೆಯಾದ ರೇಣುಕಾಸ್ವಾಮಿ ಕುಟುಂಬ ವರ್ಗದ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಪ್ರಕರಣದಲ್ಲಿ ಭಾಗಿಯಾಗಿದ್ದ 13 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನು ಬೇರೆ ಏಜೆನ್ಸಿಗೆ ಕೊಡುವ ಅಗತ್ಯವಿಲ್ಲ. ತನಿಖೆ ಪೂರ್ಣವಾದ ಬಳಿಕ ಎಲ್ಲ ಮಾಹಿತಿ ಗೊತ್ತಾಗುತ್ತದೆ. ಅಲ್ಲಿಯವರೆಗೆ ಈ ಬಗ್ಗೆ ಅಧಿಕಾರಿಗಳನ್ನು ನಾವು ಕೇಳುವುದಿಲ್ಲ, ಅವರೂ ನಮಗೆ ಹೇಳುವುದಿಲ್ಲ ಎಂದರು.

ಪೊಲೀಸರಿಗೆ ಫ್ರೀ ಹ್ಯಾಂಡ್ ಇದೆ. ಸೆಕ್ಷನ್ ಹಾಕುವುದಕ್ಕೆ ಅವರು ಸಮರ್ಥರು. ನಮ್ಮನ್ನು ಕೇಳಿಕೊಂಡು ಸೆಕ್ಷನ್ ಹಾಕುವುದಿಲ್ಲ ಎಂದು ಡಾ.ಪರಮೇಶ್ವರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net