ಅಹವಾಲು ಸಲ್ಲಿಸಿದ್ರೆ ಶೀಘ್ರ ಇತ್ಯರ್ಥ: ಜಿಲ್ಲಾಧಿಕಾರಿ ವೆಂಕಟ್​ರಾಜಾ ಭರವಸೆ

New Project(22)
Published on

ಮಾಸ್ತಿ: ಗ್ರಾಮೀಣ ಜನರಿಗೆ ಸರ್ಕಾರಿ ಯೋಜನೆಗಳ ಅರಿವು ಇರುವುದಿಲ್ಲ, ಅಧಿಕಾರಿಗಳು ಸಕಾಲಕ್ಕೆ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್​ರಾಜಾ ತಿಳಿಸಿದರು.


ಮಾಲೂರು ತಾಲೂಕು ಮಾಸ್ತಿ ಹೋಬಳಿಯ ದೇವರಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಗ್ರಾಮವಾಸ್ತವ್ಯ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಮಟ್ಟದ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯವಿದ್ದು, ಸರ್ಕಾರದಿಂದ ಲಭ್ಯವಾಗಬೇಕಾದ ಸೌಲಭ್ಯಗಳು, ಸಮಸ್ಯೆಗಳನ್ನು ಅಹವಾಲು ಮೂಲಕ ಸಲ್ಲಿಸಬೇಕು. ಅವುಗಳನ್ನು ತ್ವರಿತವಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಲಾಗುವುದು. ಯಾವ ಯೋಜನೆಯೂ ವಿಳಂಬವಿಲ್ಲದೆ ಸಕಾಲದಲ್ಲಿ ತಲುಪಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ್​ ಮಾತನಾಡಿ, ಆರೋಗ್ಯ ಇಲಾಖೆ ಆರೋಗ್ಯ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದೆ. ಸರ್ಕಾರ 18 ರಿಂದ 59 ವರ್ಷದೊಳಗಿನವರಿಗೆ ಕರೊನಾ ಬೂಸ್ಟರ್​ ಡೋಸ್​ ಲಸಿಕೆ ನೀಡುತ್ತಿದೆ. ಹತ್ತಿರದ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿ ಪಡೆಯಬಹುದು. ಆಯುಷ್ಮಾನ್​ ಭಾರತ್​ ಆರೋಗ್ಯ ವಿಮೆ ಕಾರ್ಡ್​ ಅನ್ನು ಗ್ರಾಮ ಒನ್​ ಕೇಂದ್ರಗಳಲ್ಲಿ ಉಚಿತವಾಗಿ ವಿತರಿಸಲಾಗುತ್ತಿದ್ದು, ಇದನ್ನು ಪ್ರತಿಯೊಬ್ಬ ನಾಗರಿಕರೂ ಪಡೆದುಕೊಂಡು ಉಚಿತ ಆರೋಗ್ಯ ಸೇವೆ ಪಡೆಯಬಹುದು ಎಂದು ತಿಳಿಸಿದರು.

ಬೂಸ್ಟರ್​ ಡೋಸ್​ ಹಾಗೂ ಆಯುಷ್ಮಾನ್​ ಆರೋಗ್ಯ ಕಾರ್ಡ್​ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ವೆಂಕಟ್​ರಾಜಾ ವಿವಿಧ ಇಲಾಖೆಗಳ ಮಳಿಗೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿದರು. ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ ಎಂದು ಗ್ರಾಮಸ್ಥರಿಗೆ ಹೇಳಿದರು. ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಕುರಿತು ಗ್ರಾಮಸ್ಥರಿಗೆ ವಿವರಿಸಿದರು.

ನೂಟವೆ ಗ್ರಾಪಂ ಅಧ್ಯಕ್ಷ ಕೆ.ವೈ.ಈರೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುದ್ದಣ್ಣ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ, ತಹಸೀಲ್ದಾರ್​ ರಮೇಶ್​, ತಾಪಂ ಇಒ ಮುನಿರಾಜು, ಬಿಇಒ ಮಂಜುನಾಥ್​ಗೌಡ, ಪಿಎಸ್​ಐ ವಸಂತ್​ ಕುಮಾರ್​ ಉಪಸ್ಥಿತರಿದ್ದರು.

ಏಕೆ ತಡೆಯಲು ಯತ್ನಿಸಲಿಲ್ಲ?: ಮಾಲೂರು ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ದಲ್ಲಾಳಿಗಳ ಹಸ್ತಕ್ಷೇಪ ಅಧಿಕವಾಗಿದೆ. ಇದನ್ನು ತಡೆಯುವ ಅಗತ್ಯವಿದೆ. ಸಾರ್ವಜನಿಕರು ನಿತ್ಯ ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಪರದಾಟ ನಡೆಸುವಂತಾಗಿದೆ. ಸರ್ಕಾರ ತೆಗೆದುಕೊಳ್ಳುವ ತಿಮಾರ್ನಗಳನ್ನು ಜನರಿಗೆ ಸಮಯಕ್ಕೆ ಸರಿಯಾಗಿ ಅಧಿಕಾರಿ, ಸಿಬ್ಬಂದಿ ತಲುಪಿಸಬೇಕು ಎಂದು ಕಾರ್ಯಕ್ರಮದಲ್ಲಿ ಸ್ವತಃ ಶಾಸಕ ಕೆ.ವೈ.ನಂಜೇಗೌಡ ಅವರೇ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಹಾಗಾದರೆ ಶಾಸಕರಾಗಿ ನಾಲ್ಕು ವರ್ಷ ಕಳೆದರೂ ಶಾಸಕರೇಕೆ ಭ್ರಷ್ಟಾಚಾರ ತಡೆಗೆ ಯತ್ನಿಸಲಿಲ್ಲ? ಇದು ತನ್ನದೇ ಕ್ಷೇತ್ರದ ಬಗ್ಗೆ ಶಾಸಕರೊಬ್ಬರು ಹೇಳುವ ಮಾತೇ? ಇಷ್ಟೂ ದಿನ ವಿರೋಧಿಗಳು ಈ ಬಗ್ಗೆ ಧ್ವನಿ ಎತ್ತುತ್ತಿದ್ದರೂ ಇವರೇಕೆ ಮೌನವಹಿಸಿದ್ದರು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯತೊಡಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net