

ಶಿವಮೊಗ್ಗ: ವಚನಕಾರರು ವಿಶ್ವದೃಷ್ಟಿ ಹೊಂದಿದವರು. ಆ ಕಾಲದಲ್ಲಿದ್ದ ಸ್ಥಾಪಿತ ಮೌಲ್ಯಗಳನ್ನು ಪ್ರಶ್ನಿಸಿದವರು. ಇಡೀ ವಚನಕಾರರ ಜೀವನದೃಷ್ಟಿಯೂ ಮಾನವೀಯತೆಯ ಕಡೆಗಿತ್ತು ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕುಮಾರ ಚಲ್ಯ ಬಣ್ಣಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಅಖಿಲ ಭಾರತ ಚರಣ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕುವೆಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ 79ನೇ ವಚನ ಮಂಟಪ ಮತ್ತು ಹುಣಸಘಟ್ಟ ಎಚ್.ಎಂ.ಮಲ್ಲಿಕಾರ್ಜುನಪ್ಪ ದತ್ತಿ ಕಾರ್ಯಕ್ರಮದ ಅಂಗವಾಗಿ ವಚನ ಸಾಹಿತ್ಯ ಮತ್ತು ಮಾನವೀಯ ಮೌಲ್ಯ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಯಾವ ಛಂದಸ್ಸಿಗೂ, ಮೀಮಾಂಸೆಗೂ ದಕ್ಕದ ಸಂವಾದಶೀಲ ಸಾಹಿತ್ಯ ಪ್ರಕಾರವೇ ವಚನ ಸಾಹಿತ್ಯ. ಸಾಹಿತ್ಯದಲ್ಲಿ ಸಾಂಪ್ರದಾಯಿಕ ಪರಂಪರೆಯನ್ನು ಮೀರಿದ್ದ, ಪರಂಪರಾಗತ ಮೌಲ್ಯಗಳು ಮತ್ತು ನಂಬಿಕೆಗಳನ್ನು ವಿಮರ್ಶಿಸಿ ಎಲ್ಲರಿಗೂ ಬೇಕಾದ ಎಲ್ಲರನ್ನೊಳಗೊಂಡ ನಂಬಿಕೆಗಳನ್ನು ಕಟ್ಟಿದವರು ವಚನಕಾರರು. ಸಾಮಾನ್ಯ ಜನರನ್ನು ಧರ್ಮ ಮತ್ತು ಪ್ರಭುತ್ವವು ಶೋಷಣೆಗೆ ಒಳಪಡಿಸಿತ್ತು. ತಮ್ಮ ವಚನಗಳ ಮೂಲಕ ಮೇಲ್ಜಾತಿಯ, ಅಧಿಕಾರಸ್ಥರ ಶೋಷಣೆಯ ಹುನ್ನಾರ, ಕುತಂತ್ರಗಳನ್ನು ಬಯಲಿಗೆಳೆದರು. ಸಾಮಾನ್ಯ ಜನರಿಗೆ ಅರಿವು ಮೂಡಿಸಿ ಅವರ ಸ್ವಾತಂತ್ರ್ಯ ಬದುಕಿಗೆ ಕಾರಣರಾದರು. ವರ್ಣ, ವರ್ಗ, ಜಾತಿ ಧರ್ಮಗಳ ಅತೀತವಾದ ಸಾಮಾನ್ಯರನ್ನು ಅವರ ಕೀಳರಿಮೆಗಳಿಂದ ಬಿಡುಗಡೆ ಮಾಡಿದರು ಎಂದರು.
ಇವತ್ತಿನ ಪ್ರಜಾಪ್ರಭುತ್ವದ ಆಶಯಗಳನ್ನು ಹೊಂದಿರುವ ಪಾರ್ಲಿಮೆಂಟ್ ಅನ್ನು ಆ ದಿನದಲ್ಲಿ ಅನುಭವ ಮಂಟಪದ ಹೆಸರಿನಲ್ಲಿ ಜಾರಿಗೆ ತಂದವರು ವಚನಕಾರರು. ಇವತ್ತು ಎಲ್ಲಿಯೂ ಮುಕ್ತವಾಗಿ ಮಾತನಾಡದ ಪರಿಸ್ಥಿತಿ ಕಾಣುತ್ತೇವೆ. ಆದರೆ ಆ ದಿನಗಳಲ್ಲಿ ಶರಣರು ಎಲ್ಲರಿಗೂ ಮಾತನಾಡುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಂದಿದ್ದರು. ವಚನ ಸಾಹಿತ್ಯದ ಅಂತರ್ಯದಲ್ಲಿ ಮಾನವೀಯತೆ ಮತ್ತು ತಾಯ್ತನ ಇರುವುದರಿಂದ ಇವತ್ತು ಪ್ರಸ್ತುತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಬಿ.ಜಿ.ಚನ್ನಪ್ಪ, ವಚನಕಾರರನ್ನು ಜಾತಿಯ ನೆಲೆಯಲ್ಲಿ ನೋಡಬಾರದು. ವಿಶ್ವ ಶ್ರೇಷ್ಠ ಗ್ರಂಥಗಳಿದ್ದರೆ ಅದು ವಚನಗಳು. ಮನುಷ್ಯರನ್ನು ಮನುಷ್ಯರನ್ನಾಗಿ ಮೊದಲಬಾರಿಗೆ ನೋಡಿದವರು ವಚನಕಾರರು. ವಚನಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ, ತಾವು ವಿಸ್ತರಿಸಿಕೊಳ್ಳುತ್ತ ಸಮಸಮಾಜ ಕಟ್ಟಿದವರು ಎಂದರು.
ವಿದ್ಯಾರ್ಥಿಗಳಾದ ಹೇಮಂತ, ಸಿಂಚನ, ಲಕ್ಷ್ಮೀ, ಅನಿಲ್ಕುಮಾರ, ಲಾವಣ್ಯ ಎಂ ಹುರಳಿ, ಸ್ವಪ್ನಾ, ಎಂ.ಅಂಬಿಕಾ, ಪುನೀತ್, ದತ್ತಿದಾನಿಗಳಾದ ಎಚ್.ಎಂ.ಮಲ್ಲಪ್ಪ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಮಹಾರುದ್ರ, ಪ್ರಾಧ್ಯಾಪಕರಾದ ಡಾ. ಎಂ.ಎಂ.ಮಂಜುನಾಥ, ಡಾ. ಅಣ್ಣಪ್ಪ ಎನ್. ಮಳೀಮಠ್, ಡಾ. ಎಸ್.ಆರ್.ಸೀಮಾ, ಕೆ.ಪಿ.ಪವಿತ್ರಾ ಇದ್ದರು.