ಪಿಎಸ್‍ಐ-ಸಿಟಿಐ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಸಿಬಿ ತನಿಖೆ..ಆತಂಕದಲ್ಲಿ ಅಭ್ಯರ್ಥಿಗಳು!

psi
Published on

ಬೆಂಗಳೂರು: ಪಿಎಸ್‍ಐ ಮತ್ತು ಸಿಟಿಐ ಪರೀಕ್ಷೆ ಹೊತ್ತಿನಲ್ಲೇ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮದ ಸುಳಿವು ಅಭ್ಯರ್ಥಿಗಳನ್ನು ಆತಂಕಕ್ಕೀಡು ಮಾಡಿದ್ದು, ಸಚಿವರಿಬ್ಬರ ಭಿನ್ನ ಹೇಳಿಕೆಗಳು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ವಾಣಿಜ್ಯ ತೆರಿಗೆ ನಿರೀಕ್ಷಕರ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಜ.20 ಮತ್ತು ಜ.21ರಂದು ಪರೀಕ್ಷೆ ನಡೆಸುತ್ತಿದೆ. ಗೃಹ ಇಲಾಖೆಯ 545 ಪಿಎಸ್‍ಐ ಹುದ್ದೆಗಳಿಗೆ ಜ.23 ರಂದು ಬೆಂಗಳೂರಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸಲಿದೆ. ಈ ನಡುವೆ ಗುಪ್ತಚರ ಇಲಾಖೆಯ ಪಿಎಸ್‍ಐ ಲಿಂಗಯ್ಯ ಎಂಬುವರು ಪಿಎಸ್‍ಐ ಹುದ್ದೆಗಳ ಆಕಾಂಕ್ಷಿಯೊಂದಿಗೆ ನಡೆಸಿರುವ ವಾಟ್ಸಾಪ್​ ಚರ್ಚೆ ಮತ್ತು ದೂರವಾಣಿ ಸಂಭಾಷಣೆ ಅನುಮಾನಗಳನ್ನು ಹುಟ್ಟುಹಾಕಿದೆ.

ಈ ಸಂಭಾಷಣೆಯಲ್ಲಿ ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವುದು ಖಚಿತ ಎಂಬ ಭರವಸೆ ನೀಡಿರುವುದು ಕಂಡುಬರುತ್ತಿದ್ದು, ಹಣ ಹೊಂದಾಣಿಕೆ ಮಾಡಿಕೊಳ್ಳುವಂತೆ ಹಾಗೂ ಖುದ್ದು ಭೇಟಿ ಮಾಡುವಂತೆ ಸಲಹೆ ನೀಡಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಇನ್ನು ಪಿಎಸ್‍ಐ ಹುದ್ದೆಗಳ ದರ ನಿಗದಿ ಬಗ್ಗೆ ಚರ್ಚೆಯಾಗಿದೆ. ಹಣ ಕೊಟ್ಟವರಿಗೆ ವಿಶೇಷವಾಗಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡುವುದು ಮತ್ತು ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆಯನ್ನು ತಲುಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಲಿಂಗಯ್ಯ ಅವರದು ಎಂದು ಹೇಳಲಾದ ವಾಟ್ಸ್​ಆಪ್​ ಚರ್ಚೆ ಮತ್ತು ಆಡಿಯೋ ಹೊರಬರುತ್ತಿದ್ದಂತೆ ಪಿಎಸ್‍ಐ ಹುದ್ದೆಯ ಆಕಾಂಕ್ಷಿಗಳು ಚಂದ್ರ ಲೇ ಔಟ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ದೂರು ನೀಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿದ್ದು, ಸಿಸಿಬಿ ಪೊಲೀಸರು ಲಿಂಗಯ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಶನಿವಾರ ಬೆಳಿಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ಅವರ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್‍ಐ ಹಗರಣ ನಡೆದಾಗ ಅದರ ಕುರಿತು ಸರಣಿ ಆರೋಪಗಳನ್ನು ಮಾಡಿ ದಾಖಲಾತಿ ಬಿಡುಗಡೆ ಮಾಡಿ ಪ್ರಿಯಾಂಕ್ ಖರ್ಗೆ ಗಮನ ಸೆಳೆದಿದ್ದರು. ಅದರಲ್ಲೂ ಗುಲ್ಬರ್ಗ ಜಿಲ್ಲೆಯಲ್ಲೇ ಪಿಎಸ್‍ಐ ಅಕ್ರಮ ನಡೆಸಿದವರ ಕೇಂದ್ರ ಸ್ಥಾನ ಪತ್ತೆಯಾಗಿದ್ದು, ಮಹತ್ವ ಪಡೆದುಕೊಂಡಿತ್ತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲಿಂಗಯ್ಯ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಪರೀಕ್ಷಾ ಅಕ್ರಮಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಮಾಹಿತಿ ಕಲೆ ಹಾಕುವ ಸಲುವಾಗಿ ಅಣಕು ಕರೆ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದರೂ ಸಿಸಿಬಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಪ್ರತ್ಯೇಕವಾಗಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ಈ ಹಿಂದೆ ನಡೆದ ಅಕ್ರಮಗಳ ಹಿನ್ನೆಲೆಯಲ್ಲಿ ಮುಂದೆ ಅಂತಹುದು ಮರುಕಳಿಸಬಾರದು ಎಂಬ ಕಾರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮ ಕೈಗೊಂಡಿದೆ. ಆದರೂ ಕೆಲವು ಅಧಿಕಾರಿಗಳು ತಮ್ಮ ಛಾಳಿ ಬದಲಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಚಿವರಿಬ್ಬರ ಭಿನ್ನ ಹೇಳಿಕೆಗಳು ಗೊಂದಲ ಮೂಡಿಸಿವೆ.

ಈ ನಡುವೆ ಕೆಪಿಎಸ್‍ಸಿ ನಡೆಸುತ್ತಿರುವ ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿಲ್ಲ. ಅನಗತ್ಯವಾಗಿ ಗೊಂದಲ ಮೂಡಿಸುವವರು ಇಂತಹ ವದಂತಿಗಳನ್ನು ಹರಿಯಬಿಡುತ್ತಾರೆ ಎಂಬ ಸಮರ್ಥನೆಗಳು ಕೇಳಿಬಂದಿವೆ. ಆದರೂ ಪರೀಕ್ಷಾರ್ಥಿಗಳಲ್ಲಿ ಅನುಮಾನಗಳು ಸಂಪೂರ್ಣ ನಿವಾರಣೆಯಾಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net