ಗಂಡನ ಜತೆ ಜಗಳ, ಡೆಲಿವರಿ ಬಾಯ್​ನಿಂದ ಫೋನ್​ ಕಾಲ್​: ಕೊನೆಗೆ ಹೋಟೆಲ್​ ರೂಮಿನಲ್ಲಿ ನಡೆದಿದ್ದು ಹೇಯ ಕೃತ್ಯ! Delivery Boy

Delivery Boy
Published on

Delivery Boy : ಜಗಳವಾಡಿ ಪತಿಯಿಂದ ದೂರ ಉಳಿದಿದ್ದ ವಿವಾಹಿತ ಮಹಿಳೆಯನ್ನು ಬಲವಂತವಾಗಿ ಹೋಟೆಲ್‌ಗೆ ಕರೆಸಿ, ಆಕೆಗೆ ಮಾದಕ ದ್ರವ್ಯ ಬೆರೆಸಿದ ಹಣ್ಣಿನ ಜ್ಯೂಸ್​ ನೀಡಿ ಪ್ರಜ್ಞೆ ತಪ್ಪಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಫೋಟೋ ಮತ್ತು ವಿಡಿಯೋ ರೆಕಾರ್ಡ್​ ಮಾಡಿ ಬೆದರಿಕೆ ಹಾಕಿರುವ ಘಟನೆ ಹೈದರಾಬಾದ್​ನ ಬೇಗಂಪೇಟೆಯಲ್ಲಿ ನಡೆದಿದೆ.

ಈ ಹೇಯ ಕೃತ್ಯದ ಕುರಿತು ಪೊಲೀಸರು ನೀಡಿರುವ ವಿವರಗಳ ಪ್ರಕಾರ, ಬೇಗಂಪೇಟೆ ಪ್ರದೇಶದ 37 ವರ್ಷ ವಯಸ್ಸಿನ ಮಹಿಳೆ 2013ರಲ್ಲಿ ವಿವಾಹವಾಗಿ ಮಹಾರಾಷ್ಟ್ರದಲ್ಲಿರುವ ತನ್ನ ಪತಿಯೊಂದಿಗೆ ವಾಸವಿದ್ದಳು. ಐದು ತಿಂಗಳ ಹಿಂದಷ್ಟೇ ತನ್ನ ಪತಿಯೊಂದಿಗೆ ಜಗಳವಾಡಿ, ಮನೆ ಬಿಟ್ಟು ಬೇಗಂಪೇಟೆಯಲ್ಲಿರುವ ತನ್ನ ತಾಯಿಯ ಮನೆಗೆ ಬಂದಿದ್ದಳು.

ಇದರ ನಡುವೆ ನಿಜಾಮುದ್ದೀನ್ ಎಂಬ ವ್ಯಕ್ತಿ ಮಹಿಳೆಗೆ ಕರೆ ಮಾಡಿ ತಾನು ಡೆಲಿವರಿ ಬಾಯ್ ಎಂದು ಹೇಳಿದ್ದ. ಆದರೆ, ನಾನು ಯಾವುದೇ ಆರ್ಡರ್ ಮಾಡಿಲ್ಲ ಎಂದು ಹೇಳಿ ಆಕೆ ಫೋನ್ ಕಟ್ ಮಾಡಿದ್ದಳು. ಅಂದಿನಿಂದ, ನಿಜಾಮುದ್ದೀನ್ ಆಗಾಗ್ಗೆ ಮಹಿಳೆಗೆ ಕರೆ ಮಾಡುತ್ತಿದ್ದ. ಅಲ್ಲದೇ, ಸಂದೇಶಗಳನ್ನು ಕಳುಹಿಸುತ್ತಿದ್ದ. ಅವಳನ್ನು ಹೊರಗೆ ಬರುವಂತೆ ಒತ್ತಾಯಿಸುತ್ತಿದ್ದ. ಕೊನೆಗೆ, ಆತನ ಕಿರುಕುಳ ಸಹಿಸಲಾಗದೆ, ಸಂತ್ರಸ್ತೆ ಒಂದು ದಿನ ನಗರದ ಪಬ್ಲಿಕ್ ಗಾರ್ಡನ್ಸ್‌ನಲ್ಲಿ ಅವನನ್ನು ಭೇಟಿಯಾದಳು. ಇದೇ ಭೇಟಿ ಇಬ್ಬರ ನಡುವೆ ಪರಿಚಯ ಬೆಳೆಯಿತು.

ಹೀಗಿರುವಾಗ ನಿನ್ನ ಪತಿಗೆ ಡಿವೋರ್ಸ್​ ನೀಡಿದರೆ, ನಾನು ನಿನ್ನನ್ನು ಮದುವೆ ಆಗುತ್ತೇನೆ ಎಂದು ನಿಜಾಮುದ್ದೀನ್​ ಹೇಳಿದ್ದ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಆಕೆಯ ಆಧಾರ್ ಕಾರ್ಡ್ ತೆಗೆದುಕೊಂಡ ನಂತರ, ವಕೀಲರನ್ನು ಭೇಟಿಯಾಗಲು ಗುಡಿಮಲ್ಕಾಪುರದ ಬಳಿಯ ಹೋಟೆಲ್‌ಗೆ ಆಕೆಯನ್ನು ಕರೆದೊಯ್ದ. ಹೋಟೆಲ್‌ನಲ್ಲಿ, ಸಂತ್ರಸ್ತೆಗೆ ಮಾದಕ ದ್ರವ್ಯ ಬೆರೆಸಿದ ಹಣ್ಣಿನ ಜ್ಯೂಸ್​ ನೀಡಿದನು. ಸಂತ್ರಸ್ತೆ ಪ್ರಜ್ಞೆ ತಪ್ಪಿದ ನಂತರ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಅದೇ ಸಮಯದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ರೆಕಾರ್ಡ್​ ಮಾಡಿದ್ದಾನೆ.

ಕೆಲವು ದಿನಗಳ ನಂತರ, ಆರೋಪಿ ನಿಜಾಮುದ್ದೀನ್​ ಸಂತ್ರಸ್ತೆಗೆ ಕರೆ ಮಾಡಿ ಒಂದು ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಕೊಡದಿದ್ದರೆ, ಫೋಟೋಗಳು ಮತ್ತು ವಿಡಿಯೋಗಳನ್ನು ಕುಟುಂಬದ ಸದಸ್ಯರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ. ಇದರಿಂದ ಭಯಭೀತಳಾದ ಸಂತ್ರಸ್ತೆ ಏಪ್ರಿಲ್‌ನಲ್ಲಿ ಅವನಿಗೆ ಒಂದು ಲಕ್ಷ ರೂಪಾಯಿ ಕೊಟ್ಟಳು. ಕೆಲವು ದಿನಗಳ ಬಳಿಕ ಆತ ಮತ್ತೆ ಅವಳಿಗೆ ಕರೆ ಮಾಡಿ ಭೇಟಿ ಮಾಡಲು ಹೇಳಿದ. ಬರದೇ ಹೋದರೆ, ಫೋಟೋ ಮತ್ತು ವಿಡಿಯೋಗಳನ್ನು ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ. ಆದರೆ, ಆಕೆ ಒಪ್ಪಲಿಲ್ಲ.

ಒಂದು ದಿನ, ಆಕೆ ತನ್ನ ಫ್ರೆಂಡ್​ ಜತೆ ಬರುತ್ತಿದ್ದಾಗ, ಆರೋಪಿ ನಿಜಾಮುದ್ದೀನ್​ ಸಂತ್ರಸ್ತೆಯನ್ನು ಬಲವಂತವಾಗಿ ತನ್ನ ಕಾರಿನಲ್ಲಿ ಕರೆದೊಯ್ದನು. ಸಮೀಪದ ಹೋಟೆಲ್‌ಗೆ ಕರೆದೊಯ್ದು ಮತ್ತೆ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ. ನಿಜಾಮುದ್ದೀನ್​ ಕಿರುಕುಳ ಸಹಿಸದ ಸಂತ್ರಸ್ತೆ, ಗುರುವಾರ (ಜೂನ್​ 05) ಬೇಗಂಪೇಟೆ ಪೊಲೀಸರಿಗೆ ದೂರು ನೀಡಿದಳು. ಆರೋಪಿ ನಿಜಾಮುದ್ದೀನ್ ವಿರುದ್ಧ ಪ್ರಕರಣ ದಾಖಲಿಸಿದ ಬೇಗಂಪೇಟೆ ಪೊಲೀಸರು, ಘಟನೆ ನಡೆದ ಪ್ರದೇಶವನ್ನು ಆಧರಿಸಿ ಗುಡಿಮಲ್ಕಾಪುರ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net