ಭಾರತ್ ಆಸ್ಪತ್ರೆ ತಜ್ಞ ವೈದ್ಯರಿಂದ 24 ಗಂಟೆ ಗುಣಮಟ್ಟದ ಚಿಕಿತ್ಸೆ; ಡಾ.ಬಿ.ಎಸ್.ಅಜಯ್‌ಕುಮಾರ್ ಕನಸಿನ ಕೂಸು

ವಿಜಯವಾಣಿ - 2025-03-10T150135.666
Published on

ಗುಣಮಟ್ಟದ ಚಿಕಿತ್ಸೆ, ನುರಿತ ತಜ್ಞ ವೈದ್ಯರನ್ನು ಒಳಗೊಂಡಿರುವ ಭಾರತ್ ಆಸ್ಪತ್ರೆಯಲ್ಲಿ 24 ಗಂಟೆಗಳ ರೋಗ ನಿರ್ಣಯ ಸೇವೆಗಳನ್ನು ಹೊಂದಿದೆ. ಹೆಬ್ಬಾಳು ರಿಂಗ್ ರಸ್ತೆಯಲ್ಲಿರುವ ಆಸ್ಪತ್ರೆ ಮೈಸೂರಿಗೆ ಪ್ರಪ್ರಥಮ ಕ್ಯಾನ್ಸರ್ ಆಸ್ಪತ್ರೆಯಾಗಿದ್ದು, ಇಲ್ಲಿ ಕ್ಲಿನಿಕಲ್ ಕೆಮಿಸ್ಟ್ರಿ, ಹೆಮಟಾಲಜಿ, ಬಯೋಕೆಮಿಸ್ಟ್ರಿ, ಇಮ್ಮು ನೊಲಾಜಿ, ಸರಾಲಜಿ, ಹಿಸ್ಟೋಪಥಾಲಜಿ, ಸೈಟಾಲಜಿ ಸೇರಿದಂತೆ ಇನ್ನಿತರ ಅತ್ಯಾಧುನಿಕ ಸೌಲಭ್ಯವನ್ನು ಆಸ್ಪತ್ರೆ ಒಳಗೊಂಡಿದೆ.

ರೋಗ ನಿರ್ಣಯ ಮತ್ತು ಅನುಸರಣೆಗೆ ಅಗತ್ಯವಿರುವ ಸುಧಾರಿತ ರಕ್ತಶಾಸ್ತ್ರೀಯ ಪ್ರಯೋಗಾಲಯ, ಹೆಪ್ಪುಗಟ್ಟುವಿಕೆ ಪರೀಕ್ಷೆ ಮೂಳೆ ಮಜ್ಜೆಯ ದಿನಚರಿ, ಹೆಮಟೊಪಥಾ ಲಜಿ ಸೇವೆಗಳಲ್ಲಿ ಬೆಂಬಲ ನೀಡುವ ಹೆಮಟೊ -ರೋಗಶಾಸ್ತ್ರಜ್ಞ, ಅತ್ಯಾಧುನಿಕ ಜೀವ ರಸಾಯನಶಾಸ್ತ್ರ ಮತ್ತು ರೋಗ ನಿರೋಧಕ ಪ್ರಯೋಗಾಲಯ, ಕ್ಯಾನ್ಸರ್ ರೋಗ ನಿರ್ದಾಯ ಪತ್ತೆಗೆ ನಿಖರತೆಯ ಪರೀಕ್ಷೆ ಮಾಡಲಾಗುತ್ತದೆ. ಅಮೆರಿಕದಲ್ಲಿ ಉತ್ತಮ ವೈದ್ಯರೆನಿಸಿಕೊಂಡಿದ್ದ ಡಾ.ಬಿ.ಎಸ್. ಅಜಯ್‌ಕುಮಾರ್ ಅವರು ಮೈಸೂರಿನ ಜನರಿಗೂ ಉತ್ತಮ ಸೇವೆ ನೀಡಬೇಕು ಎನ್ನುವ ಉದ್ದೇಶದಿಂದ ಭಾರತಕ್ಕೆ ಮರಳಿ 1989ರಲ್ಲಿ ಭಾರತ್ ಆಸ್ಪತ್ರೆ ಮತ್ತು ಅಂಕೋಲಾಜಿ ಸಂಸ್ಥೆ ಸ್ಥಾಪಿಸಿದರು.

ಜತೆಗೆ ಬೆಂಗಳೂರು ಇನ್​ಸ್ಟಿಟ್ಯೂಟ್ ಆಫ್ ಅಂಕೋಲಾಜಿ ಸಹ ಪ್ರಾರಂಭಿಸಿದರು. ಕ್ಯಾನ್ಸ‌ರ್ ಚಿಕಿತ್ಸೆಗಾಗಿ ಈ ಹಿಂದೆ ಬೆಂಗಳೂರು, ಮುಂಬಯಿ ಸೇರಿದಂತೆ ದೊಡ್ಡ, ದೊಡ್ಡ ನಗದಗಳಿಗೆ ತೆರಳಬೇಕಾಗಿತ್ತು. ಬಡ ಹಾಗೂ ಮಧ್ಯಮ ಜನರಿಗೆ ಈ ಚಿಕಿತ್ಸೆ ಪಡೆಯುವುದೇ ಕಷ್ಟಕರವಾಗಿತ್ತು. ಹಾಗಾಗಿ ಎಲ್ಲ ರೋಗಿಗಳಿಗೂ ಕೈಗೆಟುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಮುಂದಾದರು. ಇದರಿಂದಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಶ್ರೀಮಂತರು, ಬಡವರು ಎನ್ನದೆ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶಗಳಿಂದ ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಪ್ರಯಾಣಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲದೆ ಹಲವಾರು ಜನರ ದುಸ್ಥಿತಿಯ ಬಗ್ಗೆ ಅವರಿಗೆ ಅರಿವಿತ್ತು. ಆಗಾಗಿ ಲಾಭ ರಹಿತ ಸಂಸ್ಥೆ ಆರಂಭಿಸಿದಾಗ ಮೈಸೂರಿನ ಪಥಮ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಎನ್ನುವ ಕೀರ್ತಿಗೆ ಪಾತ್ರವಾಯಿತು.

ಪ್ರಥಮ 'ರೊಬಾಟಿಕ್ ಶಸ್ತ್ರಚಿಕಿತ್ಸೆ ಸೌಲಭ್ಯವಿದೆ

ಭಾರತ್ ಕ್ಯಾನ್ಸರ್‌ ಆಸ್ಪತ್ರೆ ಎಂದೇ ಜನಪ್ರಿಯವಾಗಿರುವ ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಮತ್ತು ರೊಬಾಟಿಕ್ ಸರ್ಜರಿ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆಯ ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ. ಅತ್ಯಾಧುನಿಕ ಡಾವಿನ್ಸಿ ರೊಬೊಟಿಕ್ ಸರ್ಜಿಕಲ್ ಸಿಸ್ಟಮ್ ಅನ್ನು ಪರಿಚಯಿಸಿದ ಮೈಸೂರಿನ ಮೊದಲ ಆರೋಗ್ಯ ಸೌಲಭ್ಯದ ಆಸ್ಪತ್ರೆ ಆಗಿದೆ. ಸಂಕೀರ್ಣ ಕಾರ್ಯವಿಧಾನಗಳ ಅಗತ್ಯವಿರುವ ರೋಗಿಗಳಿಗೆ ಈ ರೊಬಾಟಿಕ್ ಶಸ್ತ್ರಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಚಿಕಿತ್ಸಾ ವಿಧಾನ, ರೋಗಿಗೆ ಹೆಚ್ಚಿನ ನೋವಿಲ್ಲದೆ ನಿಖರ ಫಲಿತಾಂಶ ಪಡೆಯಬಹುದು. ಕಡಿಮೆ ನೋವು, ಕಡಿಮೆ ರಕ್ತದ ನಷ್ಟ, ಕಡಿಮೆ ಆಸ್ಪತ್ರೆ, ಕನಿಷ್ಠ ಶಸ್ತ್ರಚಿಕಿತ್ಸೆಯ ನಂತರದ ತೊಡಕುಗಳು ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡಲು ಡಾವಿನ್ಸಿ ವ್ಯವಸ್ಥೆ ವಿನ್ಯಾಸಗೊಳಿಸಲಾಗಿದೆ. ನಿಖರವಾದ ಶಸ್ತ್ರಚಿಕಿತ್ಸೆಯನ್ನು ಸುಗಮಗೊಳಿಸುವ ಮೂಲಕ, ತಂತ್ರಜ್ಞಾನವು ಚೇತರಿಕೆ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ. ರೋಗಿಗಳು ತಮ್ಮ ದೈನಂದಿನ ಜೀವನಕ್ಕೆ ಹೆಚ್ಚು ವೇಗವಾಗಿ ಮರಳಲು ಅನುವು ಮಾಡಿಕೊಡುತ್ತದೆ.

ಕಂಟಕವಾಗುತ್ತಿದೆ ಗರ್ಭಕಂಠದ ಕ್ಯಾನ್ಸರ್​

ಭಾರತದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್ ಕಂಟಕವಾಗುತ್ತಿದೆ. ವಾರ್ಷಿಕ ಸುಮಾರು 94857 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಭಾರತದಲ್ಲಿ 2,56,114 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇದು ಸಾಮಾನ್ಯ ಎನ್ನುವ ಮಟ್ಟಕ್ಕೆ ಹೋಗುತ್ತಿದೆ. ಪ್ರತಿ ವರ್ಷವೂ 4500ಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ಪತ್ತೆ ಮತ್ತು 12,500ಕ್ಕಿಂತ ಹೆಚ್ಚು ಜನರು ಕರ್ನಾಟಕದಲ್ಲಿ ಗರ್ಭಕೊರಳಿನ ಕ್ಯಾನ್ಸರ್‌ನೊಂದಿಗೆ ಜೀವಿಸುತ್ತಿದ್ದಾರೆ. ಸಾಮಾನ್ಯವಾಗಿ 30ರಿಂದ 60 ವರ್ಷ ವಯಸ್ಸಿನ ಮಹಿಳೆಯರಲ್ಲಿ ಗರ್ಭಗೊರಳಿನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದೆ. ಬಹುಜನರೊಂದಿಗೆ ಲೈಂಗಿಕ ಸಂಪರ್ಕ ಇರುವ ಮಹಿಳೆ, ಧೂಮಪಾನಿ, ಜನನಾಂಗದ ಸ್ವಚ್ಛತೆ ಕಾಪಾಡಿಕೊಳ್ಳದ ಮಹಿಳೆಯರಲ್ಲಿ ಈ ರೋಗಲಕ್ಷಣಗಳು ಹೆಚ್ಚು. ವಿಪರೀತ ಬಿಳಿಸೆರಗು ಹೋಗುವುದು, ಸಂಭೋಗದ ನಂತರ ಮತ್ತು ಎರಡು ಋತುಚಕ್ರಗಳ ನಡುವೆ ಆಗುವ ರಕ್ತಸ್ರಾವ, ಋತುಚಕ್ರ ನಿಂತುಹೋದ ನಂತರವೂ ಆಗುವ ರಕ್ತಸ್ರಾವ ಆಗುವುದು, ಹೊಟ್ಟೆ ಮತ್ತು ಕೆಳಬೆನ್ನಿನಲ್ಲಿ ದೀರ್ಘಕಾಲದ ನೋವು ಇದರ ಲಕ್ಷಣವಾಗಿದೆ. ಇದನ್ನು ಪ್ಯಾಪ್ ಸ್ಮಿಯರ್, ಎಚ್‌ಪಿವಿ ಮತ್ತು ಡಿಎನ್‌ಎ ಪರೀಕ್ಷೆ ವಿಐಎ ವಿಧಾನ (ಅಸಿಟಿಕ್ ಆಮ್ಲದೊಂದಿಗೆ ವಿಶುಯಲ್ ತಪಾಸಣೆ), ಪ್ಯಾಪ್ ಪರೀಕ್ಷೆ ಮೂಲಕ ಪತ್ತೆ ಹಚ್ಚಬಹುದು.

|ಡಾ. ಜಿ.ಎಚ್.ಅಭಿಲಾಶ್, ವೈದ್ಯಕೀಯ ಆಂಕೊಲಾಜಿಸ್ ಭಾರತ್ ಆಸ್ಪತ್ರೆ ಮತ್ತು ಇನ್ಸಿಟ್ಯೂಟ್ ಆಫ್ ಆಂಕೊಲಾಜಿ, ಮೈಸೂರು

ಪತ್ತೆ ಹಚ್ಚುವುದು ಬಹುಮುಖ್ಯ

ಕ್ಯಾನ್ಸರ್ ವ್ಯಾಪಿಸಿದ ಬಳಿಕ ಗೋಚರಿಸುವ ರೋಗವಾಗಿರುವುದರಿಂದ ಅದನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ಬಹುಮುಖ್ಯ. ಇತ್ತೀಚಿನ ಅಧ್ಯಯನ ಪ್ರಕಾರ ನಗರ ವಾಸಿಗಳಿಗಿಂತ ಗ್ರಾಮಾಂತರ ಪ್ರದೇಶದಲ್ಲಿಯೇ ಕ್ಯಾನ್ಸರ್‌ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪೀಡಿತರು ಹೆಚ್ಚಾಗುತ್ತಿದ್ದಾರೆ. ಅದಕ್ಕಾಗಿ ಕ್ಯಾನ್ಸರ್ ಪತ್ತೆ ಅಭಿಯಾನವನ್ನು ಆಸ್ಪತ್ರೆಯಿಂದ ಮಾಡಲಾಗುತ್ತಿದೆ. ಆಯ್ದ ಪ್ರೌಢಶಾಲೆ, ಕಾಲೇಜುಗಳಲ್ಲಿ ಕ್ಯಾನ್ಸರ್ ಕುರಿತ ವಿಶೇಷ ಅಭಿಯಾನ ರೂಪಿಸಲಾಗುತ್ತಿದೆ. ಕೆಲ ಶಾಲೆಗಳಲ್ಲಿ ಈಗಾಗಲೇ ಭಾರತ್ ಆಸ್ಪತ್ರೆಯಿಂದ ಅಭಿಯಾನದ ಮೂಲಕ ಉಪನ್ಯಾಸ, ಕ್ಯಾನ್ಸರ್ ರೋಗ ಲಕ್ಷಣ, ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕೆಲವು ರೀತಿಯ ಕ್ಯಾನ್ಸರ್‌ಗಳಲ್ಲಿ ಆರಂಭಿಕ ಪತ್ತೆ ಅಥವಾ ತಡೆಗಟ್ಟುವಿಕೆ ಒಂದು ಸವಾಲಾಗಿದೆ. ಆದ್ದರಿಂದ ಸರಿಯಾದ ಚಿಕಿತ್ಸೆ ವಿಧಾನ, ರೋಗ ಪತ್ತೆಯನ್ನು ತಿಳಿಸಿಕೊಡಬೇಕು. ಆದ್ದರಿಂದ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿನ ಪ್ರೌಢ ಹಾಗೂ ಪಿಯು ಕಾಲೇಜುಗಳಲ್ಲಿ ಕ್ಯಾನ್ಸರ್‌ರೋಗ ಲಕ್ಷಣ, ಅದನ್ನು ತಡೆಗಟ್ಟುವಿಕೆ ಸೇರಿದಂತೆ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ರಿಯಾಯಿತಿ

ಅಂತರರಾಷ್ಟ್ರೀಯ ಮಹಿಳಾ ದಿನದ ಗೌರವಾರ್ಥವಾಗಿ, ಭಾರತ್‌ ಆಸ್ಪತ್ರೆ ಮತ್ತು ಅಂಕೊಲಾಜಿ ಸಂಸ್ಥೆ (BHIO) ಮಹಿಳೆಯರಿಗೆ ಉಚಿತ ಆರೋಗ್ಯ ಶಿಬಿರಗಳು ಸೇರಿದಂತೆ ಹಲವು ಆರೋಗ್ಯ ಉಪಕ್ರಮಗಳನ್ನು ಘೋಷಿಸಿದೆ, ಮಾರ್ಚ್ ತಿಂಗಳಿನಲ್ಲಿ ಎರಡು ಶನಿವಾರಗಳಂದು (ಮಾರ್ಚ್ 15, 22) ನಡೆಯಲಿದೆ. ಈ ಶಿಬಿರಗಳಲ್ಲಿ ಮಹಿಳೆಯರು ಉಚಿತ ನೋಂದಣಿ ಮತ್ತು ಸಮಾಲೋಚನೆಗಳನ್ನು ಪಡೆಯುವ ಅವಕಾಶ ನೀಡಲಾಗಿದೆ. ಜತೆಗೆ ಮ್ಯಾಮೊಗ್ರಫಿ, ಅಲ್ವಾಸೌಂಡ್, ಪ್ಯಾಪ್ ಸ್ಟೀಯರ್ಗಳು ಮತ್ತು ರಕ್ತ ಪರೀಕ್ಷೆಗಳಂತಹ ಪ್ರಮುಖ ರೋಗ ನಿರ್ಣಯ ಸೇವೆಗಳಲ್ಲಿ ಶೇ.50ವರೆಗೆ ರಿಯಾಯಿತಿಯನ್ನು ಪಡೆಯಬಹುದು. ನಿಯಮಿತ ತಪಾಸಣಿಗಳು ಉಪಯುಕ್ತವಾಗಲಿದೆ. ಭಾರತದಲ್ಲಿ ಮಹಿಳೆಯರಲ್ಲಿ ಎಲ್ಲ ಕ್ಯಾನ್ಸ‌ರ್​ಗಳಲ್ಲಿ ಸ್ತನ, ಗರ್ಭಕಂಠ, ಅಂಡಾಶಯ ಮತ್ತು ಗರ್ಭಾಶಯದ ಕ್ಯಾನ್ಸರ್ ಗಳು ಶೇ. 70ರಷ್ಟಿವೆ. ಆರಂಭಿಕ ಪತ್ತೆ ಬಹಳ. ಏಕೆಂದರೆ ಸರಳ ಸ್ಟೀನಿಂಗ್ ತಂತ್ರಗಳು ಈ ಕ್ಯಾನ್ಸರ್​ಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಬಹುದು. ಅವುಗಳನ್ನು ಚಿಕಿತ್ಸೆ ನೀಡಲು ಸುಲಭಗೊಳಿಸುತ್ತದೆ ಮತ್ತು ಗುಣಪಡಿಸುವ ಸಾಧ್ಯತೆಗಳನ್ನು ಹೆಚ್ಚು ಸುಧಾರಿಸುತ್ತದೆ.

ಹೆಚ್ಚಾಗುತ್ತಿದೆ ಕ್ಯಾನ್ಸರ್ ರೋಗಿಗಳ ಸಂಖ್ಯೆ

ಬದಲಾಗುತ್ತಿರುವ ಜೀವನಶೈಲಿಯ ಒತ್ತಡ ಮತ್ತು ಆಯಾಸದ ಪರಿಣಾಮಗಳನ್ನು ಗಮನಿಸಿದರೆ, ಕ್ಯಾನ್ಸರ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಮೂರು ದಶಕಗಳಲ್ಲಿ, ಭಾರತ್ ಆಸ್ಪತ್ರೆ ಆಂಕೊಲಾಜಿ ಸಂಸ್ಥೆ ಮಾತ್ರ 59,000ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಆರಂಭದಲ್ಲಿ ಪ್ರತಿವರ್ಷ 500 ಹೊಸ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದ ಆಸ್ಪತ್ರೆಯಲ್ಲಿ ಈಗ ವರ್ಷಕ್ಕೆ ಅಂದಾಜು 60 ಸಾವಿರ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದರೆ ಪ್ರತಿ ವರ್ಷ ಸುಮಾರು 4 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳಲ್ಲಿ ಹೆಚ್ಚಿನವು ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಸೇವಾಭಾವನೆಯಿಂದ ಚಿಕಿತ್ಸೆ ನೀಡುತ್ತಾ ಬರುತ್ತಿರುವ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಸೇರಿದಂತೆ ಆರೋಗ್ಯದ ಎಲ್ಲ ಮಾದರಿಯ ವಿಮೆಗಳನ್ನು ಪಡೆದುಕೊಳ್ಳಲಾಗುತ್ತದೆ. ಅಲ್ಲದೆ ಕೆಲವು ದಾನಿಗಳು, ಚಾರಿಟಿಗಳ ಸಹಾಯದಿಂದಲೂ ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯಲಿ. ಲೀನಿಯರ್ ಆಕ್ಸಿಲರೇಟರ್, ಪಿಇಟಿ ಸ್ಕ್ಯಾನ್, ಪೆಥಾಲಜಿ ಲ್ಯಾಬ್ ಮತ್ತು ಬಹುಶಿಸ್ತೀಯ ಕ್ಲಿನಿಕ್ ಸೇರಿದಂತೆ ಅತ್ಯುತ್ತಮ ತಂತ್ರಜ್ಞಾನ ಸೌಕರ್ಯವನ್ನು ಆಸ್ಪತ್ರೆ ಹೊಂದಿದೆ. ಉತ್ತಮ ಗುಣಮಟ್ಟದ ಚಿಕಿತ್ಸೆ ಒದಗಿಸಿದ್ದಕ್ಕಾಗಿ ಆಸ್ಪತ್ರೆಗೆ 2003-04ನೇ ಸಾಲಿನಲ್ಲಿ ರಾಜ್ಯೋತ್ಸವ ಪುರಸ್ಕಾರವೂ ದೊರೆತಿದೆ. ದಕ್ಷಿಣ ಏಷ್ಯಾದಾದ್ಯಂತ ಅಂಕೊಲಾಜಿ ಆರೈಕೆಯಲ್ಲಿ ಮುಂಚೂಣಿಯಲ್ಲಿರುವ ಹೆಲ್ತ್‌ಕೇ‌ ಗ್ಲೋಬಲ್‌ ಎಂಟರ್‌ಪ್ರೈಸಸ್‌ನಿಂದ ತಾಂತ್ರಿಕ ಬೆಂಬಲವನ್ನು ಆಸ್ಪತ್ರೆ ಪಡೆದಿದೆ. ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿಶ್ವ ದರ್ಜೆಯ ಆರೈಕೆ ನೀಡುವುದು ಮತ್ತು ರೋಗಿಗಳ ಫಲಿತಾಂಶವನ್ನು ಪರಿವರ್ತಿಸುವುದು ಆಸ್ಪತ್ರೆ ಗುರಿಯಾಗಿದೆ.

ಗರ್ಭಕಂಠ ಕ್ಯಾನ್ಸರ್‌ಗೆ ಲಸಿಕೆ

ಗರ್ಭಕಂಠ ಕ್ಯಾನ್ಸರ್ ನಿರ್ಮೂಲನೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿರುವ ಎಚ್​ಪಿವಿ ಲಸಿಕೆಯನ್ನು ಮೈಸೂರಿನ ಭಾರತ್ ಆಸ್ಪತ್ರೆಯಲ್ಲಿ ಅತ್ಯಂತ ರಿಯಾಯಿತಿ ದರದಲ್ಲಿ ಹಾಕಲಾಗುತ್ತಿದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಗರ್ಭಕಂಠ ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತದಲ್ಲಿಯೇ ತಡೆಗಟ್ಟುವಂತಹ ಲಸಿಕೆ ಇದಾಗಿದೆ. ಇದನ್ನು ಮದುವೆಯಾಗದ 18 ವರ್ಷದೊಳಗಿನ ಹೆಣ್ಣು ಮಕ್ಕಳು ಪಡೆದುಕೊಳ್ಳಬಹುದು. ಈ ಕುರಿತು ಹೆಚ್ಚಾಗಿ ಗ್ರಾಮೀಣ ಮಹಿಳೆಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

'ಭಾರತ ಕ್ಯಾನ್ಸರ್ ತವರಾಗುತ್ತಿದೆ'

ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಕ್ಯಾನ್ಸರ್‌ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ 'ಭಾರತ ಕ್ಯಾನ್ಸರ್ ರೋಗದ ತವರು' ಅಗುತ್ತದೆ ಎನ್ನುವುದು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು. ಇಂದಿನ ಜೀವನ ಶೈಲಿ, ಅತಿಯಾದ ರಾಸಾಯನಿಕ, ಕ್ರಿಮಿನಾಶಕ ಬಳಸುವ ಆಹಾರ ಸೇವೆ, ತಂಬಾಕು, ಗುಟ್ಟಾ, ಪಾಶ್ಚಿಮಾತ್ಯ ಆಹಾರ ಪದ್ಧತಿ ಅನುಕರಣಿ ಸೇರಿದಂತೆ ನಾನಾ ಕಾರಣದಿಂದ ಕ್ಯಾನ್ಸರ್ ಲಕ್ಷಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಈ ಕುರಿತು ಜಾಗೃತಿ ಮೂಡಿಸದಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ. ನಾನು ಚೆನ್ನಾಗಿದ್ದೇನೆ, ನಾನು ಯಾಕೆ ಪರೀಕ್ಷೆ ಮಾಡಿಸಬೇಕು ಎನ್ನದೇ ಅನುಮಾನ ಬಂದಾಗ, ಅಗತ್ಯ ಪರೀಕ್ಷೆ ಮಾಡಿಕೊಂಡರೆ ಉತ್ತಮ.

ಇದರಿಂದ ರೋಗಲಕ್ಷಣ ಕಂಡು ಬಂದ ತಕ್ಷಣವೇ ಚಿಕಿತ್ಸೆ ಆರಂಭಿಸಬಹುದು. 'ಕ್ಯಾನ್ಸರ್' ಎಂದರೆ ಹಿಂದೆ ಭಯಪಡುವ ಬದಲು ಸೂಕ್ತ ಸಮಯದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಬೇಕು. 'ಕ್ಯಾನ್ಸರ್' ದೇಹವನ್ನು ಆವರಿಸಿದ ಮೇಲೆ ರೋಗ ಲಕ್ಷಣ ಗೋಚರಿಸುತ್ತದೆ. ಆದ್ದರಿಂದ ಎಷ್ಟು ಬೇಗ ರೋಗ ಪತ್ತೆಯಾಗುತ್ತದೆಯೋ ಅಷ್ಟು ಬೇಗ ಚಿಕಿತ್ಸೆ ನೀಡಲು ಸಹಕಾರಿ ಆಗುತ್ತದೆ. ಕ್ಯಾನ್ಸರ್ ಒಟ್ಟು ನಾಲ್ಕು ಹಂತವನ್ನು ಗುರುತಿಸಲಾಗುತ್ತದೆ. ಮೊದಲ, ಎರಡನೇ ಹಂತದಲ್ಲಿ ರೋಗ ಪತ್ತೆಯಾದರೆ ಗುಣಪಡಿಸಲು ಸುಲಭ. ಆದರೆ ಮೂರು ಹಾಗೂ ನಾಲ್ಕನೇ ಹಂತ ತಲುಪಿದರೆ ದೀರ್ಘಕಾಲದ ಚಿಕಿತ್ಸೆ, ಹೆಚ್ಚಿನ ಶ್ರಮಪಡಬೇಕಾಗುತ್ತದೆ. ತಕ್ಷಣವೇ ವೈದ್ಯರನ್ನು ಭೇಟಿಯಾಗುವುದು ಒಳಿತು. 'ಕ್ಯಾನ್ಸರ್' ಎಂದರೆ ಅದು ಎಲ್ಲರಲ್ಲೂ ಒಂದೇ ಮಾದರಿ ಇರುವುದಿಲ್ಲ. ಒಂದೇ ಮಾದರಿಯ ಕ್ಯಾನ್ಸರ್ ಇದ್ದರೂ ಅದು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಹಾಗಾಗಿ ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ನೀಡುವ ಬದಲು ರೋಗ ಲಕ್ಷಣ, ಅವರಿಸಿರುವ ಜಾಗದ ಆಧಾರದ ಮೇಲೆ ಬೇರೆ, ಬೇರೆ ಚಿಕಿತ್ಸೆ ನೀಡಬೇಕಾಗುತ್ತದೆ.

| ಡಾ.ಕೆ.ಜಿ.ಶ್ರೀನಿವಾಸ್

ಹಿರಿಯ ವೈದ್ಯಕೀಯ ಆಂಕೊಲಾಜಿಸ್,

ಭಾರತ್ ಆಸ್ಪತ್ರೆ ಮತ್ತು ಇಸ್ಟಿಟ್ಯೂಟ್ ಆಫ್ ಆಂಕೊಲಾಜಿ, ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net