

ಶಿವಮೊಗ್ಗ: ಮತ್ತೊಬ್ಬರ ಸಾಮರ್ಥ್ಯವನ್ನು ನಿಖರವಾಗಿ ಗುರುತಿಸಿ ಬೆಳೆಸುವ ಯಶಸ್ವಿ ನಾಯಕರು ವಿದ್ಯಾಸಂಸ್ಥೆಗಳ ಅಭಿವೃದ್ಧಿಗೆ ಅವಶ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.
ಎಸ್‌ಆರ್‌ಎನ್‌ಎಂ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನಲ್ಲಿ ನಿರ್ಮಿಸಿದ ಬಿ-ಬ್ಲಾಕ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಎನ್‌ಇಎಸ್ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆಯುತ್ತಿದೆ. ಅನುದಾನಿತ ಶಾಲೆಗಳನ್ನು ಆಧುನಿಕತೆಗೆ ತಕ್ಕಂತೆ ಉನ್ನತೀಕರಣಗೊಳಿಸುತ್ತಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಉಪನ್ಯಾಸಕರಲ್ಲಿ ನಿರಂತರ ಕಲಿಕೆ ರೂಢಿಗತವಾಗಬೇಕು. ಆಗ ಮಾತ್ರ ತರಗತಿಯಲ್ಲಿ ಗುಣಮಟ್ಟದ ಬೋಧನೆ ಮೂಲಕ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯ. ವಿದ್ಯಾರ್ಥಿಗಳಿಗೆ ಉತ್ತಮವಾಗಿ ಕಲಿಸಿದಾಗ ನಿಜವಾದ ವೃತ್ತಿ ಸಾರ್ಥಕ್ಯ ಸಿಗುತ್ತದೆ ಎಂದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಕಾಲೇಜು ಬೆಳೆದಂತೆಲ್ಲ ಸವಾಲುಗಳು ಹೆಚ್ಚುತ್ತವೆ. ವಿದ್ಯಾರ್ಥಿಗಳ ಅಪೇಕ್ಷೆ, ಕಲಿಕಾ ಸಾಮರ್ಥ್ಯಗಳು ವ್ಯತ್ಯಾಸವಾಗುತ್ತಿರುತ್ತವೆ. ಅದಕ್ಕೆ ತಕ್ಕಂತೆ ಉಪನ್ಯಾಸಕರು ಉನ್ನತೀಕರಣಗೊಳ್ಳುವ ಸವಾಲಿದೆ. ಹೊಸ ತಾಂತ್ರಿಕ ಮತ್ತು ಬೋಧನಾ ಕೌಶಲಗಳನ್ನು ಉಪನ್ಯಾಸಕರು ಕಲಿಯಬೇಕು ಎಂದು ತಿಳಿಸಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಮೈಲಾರಪ್ಪ, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಶ್ರೀಕೃಷ್ಣ, ಅನಂತದತ್ತಾ, ಸೀತಾಲಕ್ಷ್ಮೀ, ಮಾಧುರಾವ್, ಜಿ.ಎನ್.ಸುಧೀರ್, ಎಚ್.ಸಿ.ಶಿವಕುಮಾರ್ ಇತರರಿದ್ದರು.