

ತೀರ್ಥಹಳ್ಳಿ: ಇಂದಿನ ಮಕ್ಕಳೇ ಭವಿಷ್ಯದ ಆಶಾಕಿರಣಗಳು. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ಹೇಳಿದರು.
ಪಟ್ಟಣದ ಶೀಬಿನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ವೈಯಕ್ತಿಕವಾಗಿ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿಯೇ ಮಾದರಿಯಾಗಿರುವ ಈ ಶಾಲೆಗೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ. ಈ ಶಾಲೆಯ ವಾತಾವರಣ ಉತ್ತಮವಾಗಿದೆ. ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವವರ ಕಾಳಜಿಯೂ ಪ್ರಶಂಸನೀಯ ಎಂದು ಹೇಳಿದರು.
ತಹಸೀಲ್ದಾರ್ ಎಸ್.ರಂಜಿತ್ ಮಾತನಾಡಿ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಕಲಿಕೆಗೆ ಪೂರಕವಾಗಿ ನಡೆದಿರುವ ಇಂತಹ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತ. ವಿದ್ಯಾರ್ಥಿಗಳ ಕಲಿಕೆಗೆ ಒತ್ತು ನೀಡುವ ಜತೆಗೆ ಅವರಲ್ಲಿ ಶಿಸ್ತು, ಉತ್ತಮ ನಡವಳಿಕೆಯನ್ನು ಕಲಿಸಿ, ಸತ್ಪ್ರಜೆಗಳನ್ನಾಗಿ ರೂಪಿಸುವುದು ಕೂಡ ಅಗತ್ಯ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ, ಕಂದಾಯ ಇಲಾಖೆಯ ಸುಷ್ಮಾ ಧರ್ಮೇಶ್, ಸಿಆರ್‌ಪಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪವಿತ್ರಾ, ಹಿಂದುಳಿದ ವರ್ಗದ ಇಲಾಖೆಯ ರಮೇಶ್, ಮುಖ್ಯ ಶಿಕ್ಷಕಿ ಸಾವಿತ್ರಿ, ಹಳೇ ವಿದ್ಯಾರ್ಥಿಗಳ ಸಂಘದ ಚಾಮುಂಡೇಶ್ವರಿ ನಾಗರಾಜ್ ಇತರರಿದ್ದರು.