

ಸೋಮವಾರಪೇಟೆ: ಶಿಕ್ಷಣವೇ ನಿಜವಾರ ಸಂಪತ್ತು. ಅನೇಕ ದಶಕಗಳಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಅಭಿಪ್ರಾಯಪಟ್ಟರು.
ತಾಲೂಕಿನ ಹಾನಗಲ್ಲು ಶೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಸ್ಥಳೀಯ ದಾನಿಗಳಿಂದ ಶಾಲೆ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ಒದಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರವು ಸರ್ಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿಗಳಿಗೆ ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ಯಾವೊಬ್ಬ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಇಲಾಖೆಯೂ ಕಾರ್ಯನಿರ್ವಹಿಸುತ್ತಿದೆ. ಇಂತಹ ಶಾಲೆಗಳ ಉಳಿವಿಗೆ ಪಾಲಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಕಾಫಿ ಬೆಳೆಗಾರ ಡಿ.ಪಿ.ಪ್ರೀತಮ್ ಅವರು ಶಾಲೆಗೆ ಬ್ಯಾಂಡ್‌ಸೆಟ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಅವರು ಗ್ರಂಥಾಲಯಕ್ಕೆ ಪುಸ್ತಕಗಳು, ಕಾಫಿ ಬೆಳೆಗಾರರಾದ ಉಮಾ ಗಣಪತಿ ಅವರು ಟಿ.ವಿ.ಯನ್ನು ಕೊಡುಗೆಯಾಗಿ ನೀಡಿದರು.
ಇದರೊಂದಿಗೆ ಕಿಂಗ್ಸ್ ಲ್ಯಾಂಡಿಂಗ್ ಹೋಂ ಸ್ಟೇ ವತಿಯಿಂದ ಶಾಲಾ ಕಟ್ಟಡಕ್ಕೆ ಸುಣ್ಣಬಣ್ಣ ಬಳಿದು ಸಹಕಾರ ಒದಗಿಸಲಾಯಿತು. ಕಾರ್ಯಕ್ರಮದಲ್ಲಿ ಹಾನಗಲ್ಲು ಶೆಟ್ಟಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಉಲ್ಲಾಸ್, ನಾವು ಪ್ರತಿಷ್ಠಾನದ ಸುಮನಾ ಮತ್ತು ಗೌತಮ್ ಕಿರಗಂದೂರು, ಎಸ್‌ಡಿಎಂಸಿ ಉಪಾಧ್ಯಕ್ಷೆ ಲಲಿತಾ, ಮುಖ್ಯಶಿಕ್ಷಕ ಬಿ.ಎಂ. ಸತೀಶ್, ಸಹ ಶಿಕ್ಷಕರಾದ ಸುಕುಮಾರ್, ಮಂಜುನಾಥ್, ಮಾಜಿ ಸೈನಿಕ ಕೃಷ್ಣಪ್ಪ, ವೆಂಕಟೇಶ್ ಸೇರಿದಂತೆ ಇತರರು ಇದ್ದರು.
ಇದಕ್ಕೂ ಮುನ್ನ ಅರ್ಚಕ ಸುರೇಶ್ ಭಟ್ ಅವರ ನೇತೃತ್ವದಲ್ಲಿ ಶಾಲೆಯಲ್ಲಿ ಶಾರದಾ ಪೂಜೋತ್ಸವ ನಡೆಯಿತು.