

QR Codes: ಇಂದಿನ ಕಾಲಮಾನಕ್ಕೆ ಆನ್‌ಲೈನ್ ವ್ಯವಸ್ಥೆಯೇ ಎಲ್ಲದಕ್ಕೂ ಉತ್ತರ ಎಂಬಂತಾಗಿದೆ. ಸ್ಮಾರ್ಟ್ಫೋನ್ ಯುಗ ಜನರನ್ನು ಆಳುತ್ತಿರುವಾಗ ಆನ್‌ಲೈನ್ ಸೇವೆಗಳು ಸಮಾಜದಲ್ಲಿ ತಲೆ ಎತ್ತಿವೆ. ಇದರ ಬಳಕೆಯಿಂದ ಜನರ ಕೆಲಸಗಳು ಬಹಳ ಸುಲಭ ಹಾಗೂ ವೇಗವಾಗಿ ಈಡೇರುತ್ತಿವೆ. ಅದರಲ್ಲೂ ದಿನನಿತ್ಯದ ವ್ಯಾಪಾರ-ವಹಿವಾಟುಗಳಂತು ಕ್ಷಣಮಾತ್ರದಲ್ಲಿ ಮುಗಿಯುತ್ತಿವೆ. ವ್ಯಾಪಾರಿ ಮತ್ತು ಗ್ರಾಹಕರ ನಡುವಿನ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸಿರುವ ಆನ್‌ಲೈನ್ ಪಾವತಿ ಈಗ ಡಿಜಿಟಲ್ ಯುಗಕ್ಕೆ ಹೊಸ ಆಯಾಮವನ್ನೇ ನೀಡಿದೆ.
ಡಿಜಿಟಲ್ ಆದ ಮೇಲೆ ಎಲ್ಲವೂ ಸುರಕ್ಷಿತ. ಯಾರೂ ಕೂಡ ನಮ್ಮನ್ನು ವಂಚಿಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದ ವ್ಯಾಪಾರಸ್ಥರಿಗೆ ಇದೀಗ ಅಚ್ಚರಿ ಎದುರಾಗಿದೆ. ಗ್ರಾಹಕರು ತಮ್ಮ ಅಂಗಡಿಗಳಲ್ಲಿ ಖರೀದಿಸಿದ ವಸ್ತುಗಳಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಹಣ ಪಾವತಿ ಮಾಡುತ್ತಾರೆ ಎಂದು ತಮ್ಮ ವಹಿವಾಟಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಯನ್ನು ಇಂತಹ ಕ್ಯೂಆರ್ ಕೋಡ್ಗಳಿಗೆ ಮಾಲೀಕರು ಲಿಂಕ್ ಮಾಡಿಸಿರುತ್ತಾರೆ. ಆದ್ರೆ, ಅಂತಹ ಸ್ಕ್ಯಾನರ್ಗಳನ್ನೇ ಬದಲಾಯಿಸಿ, ತಮ್ಮ ಕಣ್ಣಿಗೆ ಮಣ್ಣೆರಚುವ ಕಿಡಿಗೇಡಿಗಳು ಹುಟ್ಟಿಕೊಂಡಿರುವುದು ಸದ್ಯ ಮಾಲೀಕರಲ್ಲಿ ಆತಂಕ ಸೃಷ್ಟಿಸಿದೆ.
ಮಧ್ಯಪ್ರದೇಶದ ಖಜುರಾಹೊದಲ್ಲಿ ಗ್ರಾಹಕರು ತಮ್ಮ ಅಂಗಡಿಗಳಲ್ಲಿ ಅಳವಡಿಸಲಾದ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದರೂ ಹಣ ಮಾತ್ರ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿಲ್ಲ ಎಂಬುದನ್ನು ಪತ್ತೆಹಚ್ಚಿದ ಮಾಲೀಕರು, ಪಾವತಿಸಲಾದ ಹಣ ಎಲ್ಲಿಗೆ ಹೋಯ್ತು? ಎಂದು ಅದರ ಹಿಂದಿರುವ ಕಾರಣವನ್ನು ಹುಡುಕಿದಾಗ ಭಾರೀ ಆಘಾತ ಎದುರಾಗಿದೆ. ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಮಾಲೀಕರು, ವಂಚಕರ ಕೈಚಳಕವನ್ನು ನೋಡಿ ಒಂದು ನಿಮಿಷ ನಿಬ್ಬೆರಗಾಗಿದ್ದಾರೆ.
ರಾತ್ರೋರಾತ್ರಿ ತಮ್ಮ ಅಂಗಡಿಯಲ್ಲಿನ ಆನ್‌ಲೈನ್ ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳನ್ನು ಬದಲಾಯಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಸ್ಪಷ್ಟವಾಗಿದೆ. ದುಷ್ಕರ್ಮಿಗಳ ಗ್ಯಾಂಗ್ ಕೇವಲ ಒಬ್ಬರ ಅಂಗಡಿಯನ್ನು ಮಾತ್ರ ಟಾರ್ಗೆಟ್ ಮಾಡದೆ, ಇನ್ನೂ ಹಲವರ ಅಂಗಡಿಗಳಲ್ಲಿಯೂ ಇದೇ ರೀತಿ ತಮ್ಮ ಕ್ಯೂಆರ್ ಕೋಡ್ ಇರುವ ಸ್ಕ್ಯಾನರ್‌ಗಳನ್ನು ಬದಲು ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ದಿನದಲ್ಲಿ ಆದ ವ್ಯಾಪಾರದ ಹಣವೆಲ್ಲಾ ನೇರವಾಗಿ ಕಿಡಿಗೇಡಿಗಳ ಖಾತೆಗೆ ಜಮೆಯಾಗಿದೆ.
ಅಂಗಡಿ ಮಾಲೀಕರು ವಂಚನೆ ಪ್ರಕರಣಗಳನ್ನು ತಮ್ಮ ಗಮನಕ್ಕೆ ತಂದಿದ್ದಾರೆಯೇ ಹೊರೆತು ಯಾರೊಬ್ಬರು ಸಹ ದೂರು ದಾಖಲಿಸಿಲ್ಲ ಎಂದು ಖಜುರಾಹೊ ಪೊಲೀಸ್ ಠಾಣೆಯ ಉಸ್ತುವಾರಿ ಅತುಲ್ ದೀಕ್ಷಿತ್ ಹೇಳಿದ್ದಾರೆ. ಈ ವಿಷಯದಲ್ಲಿ ತನಿಖೆ ನಡೆಸಲಾಗುವುದು. ವಂಚಕರನ್ನು ಶೀಘ್ರದಲ್ಲೇ ಕಸ್ಟಡಿಗೆ ಎಳೆದು ತರಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).