

ಬೆಂಗಳೂರು: ಮೆಟ್ರೋ ರೈಲು ಪ್ರಯಾಣಕ್ಕೆ ಟೋಕನ್ ನೀಡುವ ಬದಲಾಗಿ ಸ್ಮಾರ್ಟ್ಕಾರ್ಡ್ಗಳನ್ನೇ ಬಳಸಲು ಪ್ರಯಾಣಿಕರಿಗೆ ಸೂಚಿಸಲಾಗುತ್ತಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಅದನ್ನೂ ಮೀರಿ ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಖರೀದಿಸುವ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ನಡದಿದೆ.
ದೇಶಾದ್ಯಂತ ಮೆಟ್ರೋ ರೈಲು ನಿಗಮಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ಕ್ಯೂಆರ್ ಕೋಡ್ ಬಳಕೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದೆ. ಮಾತ್ರವಲ್ಲ, ಇದನ್ನು ಆರೋಗ್ಯ ಸೇತು ಆ್ಯಪ್ ಜತೆ ಸಮನ್ವಯಗೊಳಿಸುವಂತೆಯೂ ತಿಳಿಸಿದೆ. ಅದರಂತೆ ಆರೋಗ್ಯ ಸೇತು ಆ್ಯಪ್ನಲ್ಲಿ 'ಸುರಕ್ಷಿತ' ಎಂದು ಪರಿಗಣಿಸಲಾಗುವ ಪ್ರಯಾಣಿಕರಿಗೆ ಮಾತ್ರ ಮೆಟ್ರೋ ರೈಲಿನಲ್ಲಿ ಸಂಚಾರಕ್ಕೆ ಅವಕಾಶ ದೊರೆಯಲಿದೆ.
ದೆಹಲಿ ಮೆಟ್ರೋದ ಹಲವು ನಿಲ್ದಾಣಗಳಲ್ಲಿ ಈಗಾಗಲೇ ಕ್ಯೂಆರ್ ಕೋಡ್ ರೀಡರ್ಗಳನ್ನು ಅಳವಡಿಕೆ ಮಾಡಲಾಗಿದೆ. ನೊಯ್ಡಾ, ಮುಂಬೈ, ಹೈದರಾಬಾದ್, ಕೊಚ್ಚಿ ಮೆಟ್ರೋ ನಿಲ್ದಾಣಗಳಲ್ಲೂ ಇಂಥ ರೀಡರ್ಗಳನ್ನು ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.
ದೆಹಲಿಯಲ್ಲಿ ಬೆಳಗ್ಗೆ 6ರಿಂದ ರಾತ್ರಿ ಹತ್ತು ಗಂಟೆವರೆಗೆ ರೈಲು ಸಂಚಾರಕ್ಕೆ ಸೀಮಿತ ಮಾರ್ಗದಲ್ಲಿ 10-15 ನಿಮಿಷಕ್ಕೊಂದರಂತೆ ತೈಲು ಸಂಚರಿಸಲಿದೆ. ಸಿಬ್ಬಂದಿ ಲಭ್ಯತೆ ಹಾಗೂ ಪ್ರಯಾಣಿಕರ ದಟ್ಟಣೆಯನ್ನಾಧರಿಸಿ ಇದನ್ನು ವಿಸ್ತರಿಸಲಾಗುತ್ತದೆ.
ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಲಿದೆ. ಸ್ಮಾರ್ಟ್ಫೋನ್ಗಳಲ್ಲಿ ಆರೋಗ್ಯ ಸೇತು ಆ್ಯಪ್ ಇನ್ಸ್ಟಾಲ್ ಮಾಡಿಕೊಂಡಿರಬೇಕು. ಇದರಲ್ಲಿ 'ಸುರಕ್ಷಿತ' ಎಂದು ತೋರಿಸಿದ ಪ್ರಯಾಣಿಕರನ್ನು ನಿಲ್ದಾಣದ ಒಳಗೆ ಬಿಡಲಾಗುತ್ತದೆ. ಜತೆಗೆ, ಜ್ವರ ತಪಾಸಣೆ (ಥರ್ಮಲ್ ಸ್ಕ್ರೀನಿಂಗ್) ಕೂಡ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೋಕನ್ ಹಾಗೂ ಸ್ಮಾರ್ಟ್ಕಾರ್ಡ್ಗಳ ವಿತರಣೆಯಿಂದ ಕರೊನಾ ಹರಡಬಹುದು ಎಂಬ ಕಾರಣಕ್ಕೆ ಕ್ಯೂಆರ್ ಕೋಡ್ಗಳಿಗೆ ಮೊರೆ ಹೋಗಲಾಗುತ್ತಿದೆ. ಆದರೆ, ಸ್ಮಾರ್ಟ್ಫೋನ್ ಹೊಂದಿಲ್ಲದ ಪ್ರಯಾಣಿಕರಿಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಸ್ಥಳೀಯವಾಗಿ ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲುಗಳಲ್ಲಿ ಏರ್ ಕಂಡೀಷನಿಂಗ್ ವ್ಯವಸ್ಥೆ ಬಳಕೆ ಇರದ ಕಾರಣ ನಿಲ್ದಾಣದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ನಿಲ್ಲಿಸಿ, ಬಾಗಿಲುಗಳನ್ನು ತೆರೆದೇ ಇಟ್ಟು ಹೆಚ್ಚು ಗಾಳಿಯಾಡುವಂತೆ ಮಾಡಲಾಗುತ್ತದೆ.