

ಪವಿತ್ರ ಕುಂದಾಪುರ ಬೆಂಗಳೂರು
ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಹಾಗೂ ವಾಹನ ನೋಂದಣಿ (ಆರ್‌ಸಿ) ಕಾರ್ಡ್‌ಗಳನ್ನು ಇನ್ನಷ್ಟು ಹೈಟೆಕ್ ಹಾಗೂ ಗುಣಮಟ್ಟದ ರೂಪದಲ್ಲಿ ನೀಡಲು ಸಾರಿಗೆ ಇಲಾಖೆ ರೂಪಿಸಿರುವ ಸ್ಮಾರ್ಟ್‌ಕಾರ್ಡ್ ಯೋಜನೆಗೆ ಹೈಕೋರ್ಟ್ ಅನುಮತಿ ಕೊಟ್ಟಿದ್ದು, ಶೀಘ್ರದಲ್ಲೇ ಯೋಜನೆ ಅನುಷ್ಠಾನಕ್ಕೆ ಬರಲಿದೆ.
ಕ್ಯೂ ಆರ್ ಕೋಡ್ ಮತ್ತು ಚಿಪ್ ಆಧಾರಿತ ಕಾರ್ಡ್ ವಿತರಿಸುವ ಯೋಜನೆ ಜಾರಿಗೆ ಸಾರಿಗೆ ಇಲಾಖೆ ಕರೆದಿದ್ದ ಟೆಂಡರ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ವಜಾಗೊಳಿಸಿದೆ. ಟೆಂಡರ್ ಆಹ್ವಾನದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಈ ಮೊದಲು ಹೈಕೋರ್ಟ್ ಅಂತಿಮ ತೀರ್ಪಿಗೆ ಒಳಪಟ್ಟು ಟೆಂಡರ್ ಪ್ರಕ್ರಿಯೆ ಮುಂದುವರಿಸುವಂತೆ ನ್ಯಾಯಪೀಠ ಷರತ್ತು ವಿಧಿಸಿತ್ತು. ಈಗ ಅರ್ಜಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ ಇದ್ದಂತಹ ತಡೆ ತೆರವಾಗಿದೆ. ಹೀಗಾಗಿ ಟೆಂಡರ್‌ನಲ್ಲಿ ಭಾಗಿಯಾಗಿದ್ದ ಕಂಪನಿಗಳ ಪೈಕಿ ಒಂದು ಕಂಪನಿ ಅಂತಿಮವಾಗಿದೆ. ಅನುಮೋದನೆಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಟಿಎಂ ಮಾದರಿ ಕಾರ್ಡ್:
ಪ್ರಸ್ತುತ ಕೊಡುತ್ತಿರುವ ಆರ್‌ಸಿ, ಡಿಎಲ್‌ಗಳು ಪಾಲಿ ವಿನೈಲ್ ಕ್ಲೋರೈಡ್ (ಪಿವಿಸಿ) ಕಾರ್ಡ್‌ಗಳಾಗಿವೆ. ಹೊಸ ಯೋಜನೆಯಲ್ಲಿ ಪಾಲಿ ಕಾರ್ಬನೇಟ್ ಕಾರ್ಡ್ (ಪಿಸಿಸಿ) ಗಳನ್ನು ವಿತರಣೆ ಮಾಡಲಾಗುತ್ತದೆ. ಇವು ಎಟಿಎಂ ಕಾರ್ಡ್‌ಗಳ ಮಾದರಿಯಲ್ಲಿ ಅತ್ಯಂತ ಗುಣಮಟ್ಟದ ಕಾರ್ಡ್‌ಗಳಾಗಿರುತ್ತವೆ. ಎಷ್ಟು ವರ್ಷಗಳಾದರೂ ಅಕ್ಷರಗಳು ಅಳಿಸಿ ಹೋಗಲ್ಲ ಹಾಗೂ ಕಾರ್ಡ್‌ಗಳು ಮುರಿಯುವ ಸಾಧ್ಯತೆ ಕಡಿಮೆ.
ಸ್ಕ್ಯಾನ್ ಮಾಡಿದರೆ ಸಮಗ್ರ ವಿವರ:
ಈವರೆಗೆ ಸ್ಮಾರ್ಟ್‌ಕಾರ್ಡ್‌ಗಳಲ್ಲಿ ಚಿಪ್ ವ್ಯವಸ್ಥೆ ಇತ್ತು. ಹೊಸ ಕಾರ್ಡ್‌ಗಳಲ್ಲಿ ಚಿಪ್ ಜತೆಗೆ ಕ್ಯೂ ಆರ್ ಕೋಡ್ ಇರಲಿದೆ. ಸ್ಕ್ಯಾನ್ ಮಾಡಿದರೆ ಕಾರ್ಡ್‌ನಲ್ಲಿರುವ ಪ್ರಾಥಮಿಕ ಮಾಹಿತಿ ಸಿಗಲಿದೆ. ಸಂಪೂರ್ಣ ಮಾಹಿತಿ ಬೇಕಾದರೆ ಚಿಪ್‌ಗೆ ಕಾರ್ಡ್ ರೀಡರ್ ಬಳಸಿ ನೋಡಬಹುದು.
ಜಾರಿಯಾಗದಿದ್ದರೆ ಸಮಸ್ಯೆ
ಸದ್ಯ ಆರ್‌ಸಿ, ಡಿಎಲ್‌ಗೆ ಸ್ಮಾರ್ಟ್‌ಕಾರ್ಡ್ ವಿತರಿಸುವ ಗುತ್ತಿಗೆ ಪಡೆದಿದ್ದ ರೋಸ್‌ಮರ್ಟ್ ಟೆಕ್ನಾಲಜೀಸ್ ಪ್ರೈ.ಲಿ.ನ ಅವಧಿ 2024ರ ಫೆಬ್ರವರಿಗೆ ಮುಕ್ತಾಯವಾಗಿದ್ದು, ಮಾ.24ರವರೆಗೆ ವಿಸ್ತರಿಸಲಾಗಿದೆ. ಅಷ್ಟರಲ್ಲಿ ಹೊಸ ಯೋಜನೆ ಜಾರಿಗೆ ಬರಬೇಕು. ಇಲ್ಲವಾದರೆ ಕಾರ್ಡ್ ವಿತರಣೆಯಲ್ಲಿ ಸಮಸ್ಯೆಯಾಗುತ್ತದೆ. ಹೊಸ ಯೋಜನೆ ಜಾರಿಗೆ 3 ತಿಂಗಳು ಬೇಕಾಗುತ್ತದೆ.
ಕಾರ್ಡ್‌ನಲ್ಲಿ 25 ವಿವರ
ವಾಹನ ಮಾಲೀಕನ ಹೆಸರು, ವಿಳಾಸ, ೆಟೋ, ಜನ್ಮದಿನಾಂಕ, ಸಿಂಧುತ್ವ ಅವಧಿ, ಮೊಬೈಲ್ ಸಂಖ್ಯೆ ಸೇರಿ 25ಕ್ಕೂ ಹೆಚ್ಚು ವಿವರಗಳು ಡಿಎಲ್‌ನಲ್ಲಿ ಇರಲಿದೆ. ಆರ್‌ಸಿ ಕಾರ್ಡ್‌ನಲ್ಲಿ ವಾಹನ ಮಾದರಿ, ನೋಂದಣಿ ದಿನಾಂಕ, ತಯಾರಿಕಾ ದಿನ, ಮಾಲೀಕರ ವಿವರ, ತಯಾರಿಕಾ ಕಂಪನಿ ವಿವರ, ಇಂಜಿನ್ ನಂಬರ್, ಚಾಸ್ಸಿ ನಂಬರ್, ನೋಂದಣಿ ಸಂಖ್ಯೆ ಸೇರಿ ಇನ್ನಿತರ ಮಾಹಿತಿ ಇರಲಿದೆ. ಚಿಪ್‌ನಲ್ಲಿ ಪ್ರಾಥಮಿಕ ಮಾಹಿತಿ ಸಿಕ್ಕರೆ ಕ್ಯೂ ಆರ್ ಕೋರ್ಡ್‌ನಲ್ಲಿ ಸಂಪೂರ್ಣ ವಿವರಗಳು ಇರಲಿವೆ.
ಯೋಜನೆ ಅನುಕೂಲವೇನು?
ಕ್ಯೂ ಆರ್ ಕೋಡ್ ಸ್ಕಾೃನ್ ಮಾಡಿದರೆ ವಾಹನ, ಮಾಲೀಕರನ ವಿವರ ಲಭ್ಯ. ಅಪಘಾತ, ಕಳ್ಳತನ, ಸಂಚಾರ ನಿಯಮ ಉಲ್ಲಂಘನೆ ವೇಳೆ ಪರಿಶೀಲನೆಗೆ ಉಪಯುಕ್ತ. ಕೇಂದ್ರೀಕೃತ ವ್ಯವಸ್ಥೆ ಜಾರಿಯಿಂದ ಸ್ಮಾರ್ಟ್‌ಕಾರ್ಡ್ ಪೂರೈಕೆಯಲ್ಲಿ ವ್ಯತ್ಯಾಸ ಆಗಲ್ಲ.
ಹೈಕೋರ್ಟ್ ಹೇಳಿದ್ದೇನು?
ಟೆಂಡರ್ ಆಹ್ವಾನದಲ್ಲಿ ಅಕ್ರಮ ಕಂಡು ಬಂದಿಲ್ಲ. ಟೆಂಡರ್ ಷರತ್ತು ನಿರ್ದಿಷ್ಟ ಸಂಸ್ಥೆಗೆ ಮಾತ್ರ ಅನುಕೂಲಕರವಾಗಿದೆ ಎಂಬ ಅರ್ಜಿದಾರರ ವಾದ ಆಧಾರರಹಿತ. ಟೆಂಡರ್ ಕರೆಯುವಾಗ ವಿಧಿಸುವ ಷರತ್ತು ನ್ಯಾಯಸಮ್ಮತ, ಪಾರದರ್ಶಕತೆ ಮತ್ತು ಕಾನೂನುದ್ದ ಉದ್ದೇಶ ಖಚಿತಪಡಿಸುತ್ತದೆ. ಇದನ್ನು ತಾರತಮ್ಯವೆನ್ನುವುದು ಒಪ್ಪುವಂತಹದ್ದಲ್ಲ.