

ದೋಹಾ : ಕತಾರ್ ಕರ್ನಾಟಕ ಸಂಘವು ಇತ್ತೀಚೆಗೆ ದೋಹಾದಲ್ಲಿ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉಪಸಭಾಪತಿ ಹಾಗೂ ಹಿರಿಯ ನಟಿ ಡಾ.ಉಮಾಶ್ರೀ ಅವರಿಗೆ ಕತಾರ್ ಕನ್ನಡ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಉಮಾಶ್ರೀ, ಕತಾರ್‌ನಲ್ಲಿ ಕನ್ನಡದ ಹೆಮ್ಮೆಯ ಪುತ್ರರೆಲ್ಲರೂ ಸೇರಿ ಕರುನಾಡ ವೈಭವ ಎಂಬ ಶೀರ್ಷಿಕೆಯಡಿ ತಾಯಿ ಭುವನೇಶ್ವರಿಯನ್ನು ಸ್ಮರಿಸುವ, ಆರಾಧಿಸುವ ಮೂಲಕ ಕನ್ನಡಿಗರನ್ನೆಲ್ಲರನ್ನೂ ಇಲ್ಲಿ ಒಗ್ಗೂಡಿಸಿ, ಕಲಾ ಸಾಂಸ್ಕೃತಿಕ ರಸದೌತಣವನ್ನು ಉಣಬಡಿಸುತ್ತಿರುವುದು ಅತ್ಯಂತ ಸಂತೋಷ ತರುವಂತಹದ್ದು. ವಿದೇಶದಲ್ಲಿದ್ದರೂ, ಕನ್ನಡದ ಮನಸ್ಸು ಹೊಂದಿರುವ ಅಭಿಮಾನಿಗಳಿರುವವರೆಗೆ ಕನ್ನಡ ಎಂದಿಗೂ ಸಾಯುವುದಿಲ್ಲ ಎಂದರು.
ಕರುನಾಡಿನಲ್ಲಿ ಈ ಕನ್ನಡತಿ, ಏನಾದರೂ ಒಂದಿಷ್ಟು ಕೆಲಸಗಳನ್ನು ಮಾಡಿದ್ದರೆ, ನಿಮ್ಮಂತರ ಅಭಿಮಾನಿಗಳೆಲ್ಲರ ಆಶೀರ್ವಾದದಿಂದ ಸಾಧ್ಯವಾಗಿದೆ. ಹಾಗಾಗಿ ಈ ಸನ್ಮಾನದ ಸರ್ವಶ್ರೇಷ್ಠತೆಯೂ ನಿಮ್ಮೆಲ್ಲರಿಗೂ ಸಲ್ಲತಕ್ಕದ್ದು ಎಂದು ಉಮಾಶ್ರೀ ಇದೇ ವೇಳೆ ಭಾವುಕರಾಗಿ ನುಡಿದರು.
ಕಾರ್ಯಕ್ರಮದಲ್ಲಿ ಹೃದ್ರೋಗ ತಜ್ಞ ಹಾಗೂ ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಮೊಯಿನುದ್ದೀನ್ ಬಾವ, ಕತಾರ್ ಕರ್ನಾಟಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಮಾಜಿ ಅಧ್ಯಕ್ಷ ರವಿ ಶೆಟ್ಟಿ, ಕನ್ನಡ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮತ್ತಿತರರು ಪಾಲ್ಗೊಂಡಿದ್ದರು.
ಕರ್ನಾಟಕದಿಂದ ಆಗಮಿಸಿದ್ದ ಕಲಾವಿದರಿಂದ ಹಾಸ್ಯ, ಸಂಗೀತ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.