ಇನ್ನು 12 ವರ್ಷ ಇವರೇ ಅಧ್ಯಕ್ಷರು- ತಿದ್ದುಪಡಿಗೊಂಡಿತು ಸಂವಿಧಾನ

russia
Published on

ಮಾಸ್ಕೊ: ರಷ್ಯಾದ ಸಂವಿಧಾನಕ್ಕೆ ತಿದ್ದುಪಡಿಯಾಗಿದ್ದು, ಈ ಮೂಲಕ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2036ರವರೆಗೂ ಇದೇ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.

ಇವರ ಅಧಿಕಾರಾವಧಿ 2024ಕ್ಕೆ ಕೊನೆಗೊಳ್ಳಬೇಕಾಗಿತ್ತು. ಆದರೆ ತಮ್ಮ ಅಧಿಕಾರದಿಂದಾಗಿ ಭಾರಿ ಜನಮೆಚ್ಚುಗೆ ಗಳಿಸಿರುವ ಪುಟಿನ್ ಅವರಿಗೆ ಮುಂದಿನ ಎರಡು ಅವಧಿಗೆ ಅಧ್ಯಕ್ಷೀಯ ಪಟ್ಟವನ್ನು ಕಟ್ಟುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಈ ಮೂಲಕ ಮತ್ತೆ 12 ವರ್ಷಗಳವರೆಗೆ ಅವರೇ ಅಧಿಕಾರದಲ್ಲಿ ಇರುವುದಕ್ಕೆ ಅನುವು ಮಾಡಿಕೊಡಲಾಗಿದೆ. ಈ ನಿರ್ಣಯಕ್ಕೆ ರಷ್ಯಾ ಸಂಸತ್ತು ಹಸಿರು ನಿಶಾನೆ ತೋರಿದೆ.

ರಷ್ಯಾ ಸಂವಿಧಾನದ ಉದ್ದೇಶಿತ ತಿದ್ದುಪಡಿಗೆ ಕಳೆದ ಏಪ್ರಿಲ್ 22ರಂದು ರಷ್ಯಾದಲ್ಲಿ ಸಾಂವಿಧಾನಿಕ ಜನಾಭಿಪ್ರಾಯ ಸಂಗ್ರಹಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಕುರಿತು ಸಂಸತ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆದರೆ ಕೋವಿಡ್‌-19 ಹಿನ್ನೆಲೆಯಲ್ಲಿ ಹಾಗೂ ಎರಡನೇ ಮಹಾಯುದ್ಧದ ವಿಜಯೋತ್ಸವದ ಸಂಕೇತವಾಗಿ 75ನೇ ವರ್ಷದ ದಿನಾಚರಣೆ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡಲಾಗಿತ್ತು. ನಂತರ ಇದನ್ನು ಜುಲೈ 1ರಂದು ಮುಂದೂಡಲಾಗಿತ್ತು.

ರಷ್ಯಾದ 383 ಸಂಸದರು ಸಂವಿಧಾನ ತಿದ್ದುಪಡಿ ಪರವಾಗಿ ಮತ ಚಲಾಯಿಸಿದ್ದು, 43 ಸಂಸದರು ಮತದಾನಕ್ಕೆ ಗೈರಾಗಿದ್ದರು. ಇದೀಗ ರಷ್ಯಾ ಜನರು ಮತ ಚಲಾಯಿಸುವ ಮೂಲಕ ಅಧ್ಯಕ್ಷರ ಹಾದಿಯನ್ನು ಸುಗಮಗೊಳಿಸಿರುವುದಾಗಿ ವರದಿ ತಿಳಿಸಿದೆ. ದೇಶಾದ್ಯಂತ ನಡೆದ ಮತ ಚಲಾವಣೆಯಲ್ಲಿ ಪುಟಿನ್ ಅಗ್ರ ಸ್ಥಾನ ಪಡೆದಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net