

Putin: ಆ.15ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಖಾಮುಖಿ ಭೇಟಿಯಾಗಲು ಸಜ್ಜಾಗಿದ್ದಾರೆ. ಅಮೆರಿಕದ ಶ್ವೇತಭವನದ ಬದಲಿಗೆ ಅಲಾಸ್ಕಾದಲ್ಲಿ ಭೇಟಿಯಾಗಲು ಎರಡು ರಾಷ್ಟ್ರಗಳ ನಾಯಕರು ತೀರ್ಮಾನಿಸಿದ್ದಾರೆ. ಈ ಸಭೆಗೆ ಇನ್ನೊಂದು ದಿನ ಬಾಕಿ ಇರುವಂತೆಯೇ ಇದೀಗ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್, ಪುಟಿನ್ಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.
ಪುಟಿನ್ ಮತ್ತು ಟ್ರಂಪ್ ಭೇಟಿಯಲ್ಲಿ ರಷ್ಯಾ ಮತ್ತು ಯುಕ್ರೇನ್ ನಡುವಿನ ದೀರ್ಘಕಾಲದ ಯುದ್ಧವನ್ನು ತಡೆಯುವ ಬಗ್ಗೆ ಹೆಚ್ಚು ಚರ್ಚಿಸುವುದಾಗಿ ಟ್ರಂಪ್ ಆಶಿಸಿದ್ದಾರೆ. ಆದಾಗ್ಯೂ, ಟ್ರಂಪ್ ಅವರೊಂದಿಗಿನ ಭೇಟಿಯ ಸಮಯದಲ್ಲೇ ರಷ್ಯಾ ಅಧ್ಯಕ್ಷರೊಂದಿಗೆ ಕಿಮ್ ಜಾಂಗ್ ಫೋನ್ ಕರೆ ಮಾಡಿರುವುದು ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಈ ಇಬ್ಬರು ನಾಯಕರು ಮಾತಾಡಿಕೊಂಡಿದ್ದೇನು? ಯಾವ ವಿಚಾರವನ್ನು ಚರ್ಚಿಸಿದ್ದಾರೆ ಎಂಬ ಕೌತುಕ ಹಲವರಲ್ಲಿ ಕಾಡಿದೆ.
ಉತ್ತರ ಕೊರಿಯಾದ ಅಧಿಕೃತ ಮಾಧ್ಯಮ ವರದಿ ಪ್ರಕಾರ, ಇಬ್ಬರು ನಾಯಕರು ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ, ಯುಕ್ರೇನ್ ಮೇಲಿನ ಯುದ್ಧಕ್ಕೆ ಸೇನೆಯನ್ನು ಕಳುಹಿಸಿದ್ದಕ್ಕಾಗಿ ಪುಟಿನ್ ಅವರು ಕಿಮ್‌ಗೆ ಧನ್ಯವಾದ ತಿಳಿಸಿದರು. ಕುರ್ಸ್ಕ್ ಪ್ರದೇಶವನ್ನು ವಶಪಡಿಸಿಕೊಳ್ಳುವಲ್ಲಿ ಉತ್ತರ ಕೊರಿಯಾದ ಸೈನಿಕರು ಸಾಕಷ್ಟು ಸಹಕಾರ ನೀಡಿದ್ದಾರೆ. ಅದಕ್ಕೆ ಹೃತ್ಪೂರ್ವಕ ಧನ್ಯವಾದ ಎಂದು ರಷ್ಯಾ ಅಧ್ಯಕ್ಷರು ತಿಳಿಸಿರುವುದಾಗಿ ಹೇಳಿದೆ.
ಅದೇ ರೀತಿ, ಪುಟಿನ್ ಅವರು ಟ್ರಂಪ್ ಅವರೊಂದಿಗಿನ ತಮ್ಮ ಭೇಟಿಯ ವಿವರಗಳನ್ನು ಅಧ್ಯಕ್ಷ ಕಿಮ್ ಜತೆಗೆ ಹಂಚಿಕೊಂಡಿದ್ದಾರೆ ಎಂದು ರಷ್ಯಾದ ಮಾಧ್ಯಮ ವರದಿ ಉಲ್ಲೇಖಿಸಿದೆ. ಈ ಫೋನ್ ಸಂಭಾಷಣೆಯಲ್ಲಿ ಇಬ್ಬರೂ ನಾಯಕರು ತಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಭವಿಷ್ಯದಲ್ಲಿ ನಿಕಟ ಸಂಬಂಧಗಳನ್ನು ಗಟ್ಟಿಯಾಗಿ ಸ್ಥಾಪಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದೆ.
24 ವರ್ಷಗಳಲ್ಲಿ ಮೊದಲ ಬಾರಿಗೆ ವ್ಲಾಡಿಮಿರ್ ಪುಟಿನ್, ಕಳೆದ ವರ್ಷ ಉತ್ತರ ಕೊರಿಯಾಕ್ಕೆ ಭೇಟಿ ನೀಡಿದರು. 2024ರ ಜೂನ್‌ನಲ್ಲಿ ಪ್ಯೊಂಗ್ಯಾಂಗ್‌ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ, ಎರಡೂ ದೇಶಗಳ ಮೇಲೆ ದಾಳಿಯ ಸಂದರ್ಭದಲ್ಲಿ ತಕ್ಷಣದ ಮಿಲಿಟರಿ ನೆರವು ನೀಡುವ ಶೀತಲ ಸಮರದ ಯುಗದ ಒಪ್ಪಂದವನ್ನು ಇಬ್ಬರೂ ನಾಯಕರು ನವೀಕರಿಸಿದರು. ಆ ಸಮಯದಲ್ಲಿ, ಪುಟಿನ್ ಕಿಮ್ರನ್ನು ಮಾಸ್ಕೋಗೆ ಬರುವಂತೆಯೂ ಆಹ್ವಾನಿಸಿದ್ದರು,(ಏಜೆನ್ಸೀಸ್).