ಬನ್ನಡ್ಕ ಅಪಘಾತಗಳಿಗೆ ಬೇಕು ಬ್ರೇಕ್!

 ಅಪಾಯಕಾರಿಯಾಗಿರುವ ಬನ್ನಡ್ಕ ಬಳಿಯ ಹೆದ್ದಾರಿ ಮಾರ್ಗ.
ಅಪಾಯಕಾರಿಯಾಗಿರುವ ಬನ್ನಡ್ಕ ಬಳಿಯ ಹೆದ್ದಾರಿ ಮಾರ್ಗ.
Published on

ಪ್ರಮುಖ ಮುಖ್ಯಾಂಶಗಳು

  • ವರ್ಷದಲ್ಲಿ 20ಕ್ಕೂ ಅಧಿಕ ಆ್ಯಕ್ಸಿಡೆಂಟ್
  • ಅವೈಜ್ಞಾನಿಕ ಕಾಮಗಾರಿ ವಿರುದ್ಧ ಆಕ್ರೋಶ
ಯಶೋಧರ ವಿ.ಬಂಗೇರ ಮೂಡುಬಿದಿರೆ
ಮಂಗಳೂರು- ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ಮೂಡುಬಿದಿರೆ ಬನ್ನಡ್ಕ ಪ್ರದೇಶ ಅಪಘಾತಗಳ ತಾಣವಾಗಿ ಮಾರ್ಪಟ್ಟಿದೆ. ಕಾಮಗಾರಿಯಿಂದಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ
ಒಂದು ವರ್ಷದಲ್ಲಿ ಈ ಭಾಗದಲ್ಲಿ 20ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಸಾವು-ನೋವುಗಳ ಸಂಖ್ಯೆ ಏರುತ್ತಲೇ ಇದೆ. ಇತ್ತೀಚಿನ ಒಂದು ವಾರದಲ್ಲೇ ಆರು ಅಪಘಾತಗಳು ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ತಿಂಗಳಲ್ಲಿ ಬನ್ನಡ್ಕದಿಂದ ಬೆಳುವಾಯಿವರೆಗಿನ ರಸ್ತೆಯಲ್ಲಿ 10ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ.

ಸರ್ವೀಸ್ ರಸ್ತೆಯಲ್ಲೇ ಹೆಚ್ಚು ಅವಘಡ

ಬನ್ನಡ್ಕ, ಕೆಸರುಗದ್ದೆ ಹಾಗೂ ಬೆಳುವಾಯಿ ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿಯೊಂದಿಗೆ ಸಂಪರ್ಕ ಕಲ್ಪಿಸುವ ಸರ್ವೀಸ್ ರಸ್ತೆಗಳು ಮತ್ತು ಡೈವರ್ಷನ್‌ಗಳು ಸರಿಯಾದ ಯೋಜನೆಯಿಲ್ಲದೆ ನಿರ್ಮಾಣಗೊಂಡಿವೆ ಎಂಬ ಆರೋಪ ಕೇಳಿಬರುತ್ತಿದೆ. ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಪ್ರವೇಶಿಸುವ ವಾಹನಗಳು ಹಾಗೂ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಸೇರುವ ವಾಹನಗಳಿಗೆ ಸೂಕ್ತ ಸೂಚನಾ ಫಲಕಗಳು, ವೇಗ ನಿಯಂತ್ರಣ ವ್ಯವಸ್ಥೆಗಳು ಮತ್ತು ಸುರಕ್ಷತಾ ಕ್ರಮಗಳ ಕೊರತೆಯಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಪಡುಮಾರ್ನಾಡಿನ ಅಮನಬೆಟ್ಟು ಕ್ರಾಸ್, ಬನ್ನಡ್ಕ ದೈವಸ್ಥಾನ ಬಳಿಯ ಸಂಪರ್ಕ ರಸ್ತೆಗಳು ಅಸಮರ್ಪಕವಾಗಿರುವುದರಿಂದ ವಾಹನ ಸವಾರರು ಗೊಂದಲಕ್ಕೀಡಾಗುತ್ತಿದ್ದಾರೆ. ವೇಗವಾಗಿ ಸಂಚರಿಸುವ ವಾಹನಗಳು ಟರ್ನ್ ಪಡೆಯುವ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.

ಅವೈಜ್ಞಾನಿಕ ಕಾಮಗಾರಿ

ಮಂಗಳೂರಿನಿಂದ ಕಾರ್ಕಳದವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತೀರಾ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಆರಂಭವಾದ ದಿನದಿಂದಲೇ ಹತ್ತಾರು ಭೀಕರ ಅಪಘಾತಗಳು ಸಂಭವಿಸಿದ್ದರೂ, ಸಂಬAಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗಂಭೀರ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಹಳೇ ಯೋಜನೆ ಸಮಸ್ಯೆಗೆ ಮೂಲ?

ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೆಲವು ಖಾಸಗಿ ಜಾಗಗಳನ್ನು ಉಳಿಸುವ ಉದ್ದೇಶದಿಂದ ಹೆದ್ದಾರಿಯನ್ನು ಅಂಕುಡೊಂಕಾಗಿ ನಿರ್ಮಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ದಶಕಗಳ ಹಿಂದಿನ ಹಳೇ ಯೋಜನಾ ನಕ್ಷೆಯನ್ನು ಬಳಸಿಕೊಂಡೇ ಕಾಮಗಾರಿ ನಡೆಸುತ್ತಿರುವುದೇ ಇಂದಿನ ಅವಾಂತರಗಳಿಗೆ ಪ್ರಮುಖ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.

ಗುಣಮಟ್ಟದ ಪ್ರಶ್ನೆ

ಹೆದ್ದಾರಿಯ ಕೆಲ ಮೇಲ್ಸೇತುವೆಗಳು ತೀಕ್ಷ್ಣ ಹಾಗು ಅಪಾಯಕಾರಿ ತಿರುವುಗಳನ್ನು ಹೊಂದಿದ್ದು, ವಾಹನ ಸವಾರರಿಗೆ ನಿರಂತರ ಅಪಾಯ ಉಂಟುಮಾಡುತ್ತಿವೆ. ವೇಗವಾಗಿ ಸಂಚರಿಸುವ ವಾಹನಗಳು ನಿಯಂತ್ರಣ ತಪ್ಪಿದರೆ ಮೇಲ್ಸೇತುವೆಯಿಂದ ಕೆಳಕ್ಕೆ ಬೀಳುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹೆದ್ದಾರಿಯ ಎರಡೂ ಬದಿಗಳಲ್ಲಿ ನಿರ್ಮಿಸಿರುವ ಚರಂಡಿಗಳಲ್ಲಿ ಮಳೆ ನೀರು ಸರಿಯಾಗಿ ಹರಿಯದಿರುವುದು ಕಾಮಗಾರಿಯ ಗುಣಮಟ್ಟದ ಮೇಲೂ ಪ್ರಶ್ನೆ ಎಬ್ಬಿದೆ.

ಮಂಗಳೂರು ಮತ್ತು ಕಾರ್ಕಳ ನಡುವಿನ ಸಂಪರ್ಕದ ಜೀವನಾಡಿಯಾಗಬೇಕಿದ್ದ ರಾಷ್ಟ್ರೀಯ ಹೆದ್ದಾರಿ ಇಂದು ಆತಂಕದ ಕಾರಿಡಾರ್ ಆಗಿ ಮಾರ್ಪಟ್ಟಿದೆ. ಹೆದ್ದಾರಿ ಕಾಮಗಾರಿ ಮುಂದುವರಿಯುತ್ತಿದ್ದAತೆ, ಸರಣಿ ಮಾರಣಾಂತಿಕ ಅಪಘಾತಗಳು ಸಂಭವಿಸುತ್ತಿವೆ. ಇದು ಅವೈಜ್ಞಾನಿಕ ಮತ್ತು ಪ್ರಾಣಾಪಾಯಕಾರಿ.

— — ನಿತಿನ್ ಬೆಳುವಾಯಿ, ಸಾಮಾಜಿಕ ಹೋರಾಟಗಾರ

ಅಧಿಕಾರಿಗಳು ಈ ಸಾವುಗಳನ್ನು ಕೇವಲ ಅಂಕಿಅAಶಗಳಾಗಿ ನೋಡುವುದನ್ನು ನಿಲ್ಲಿಸಿ, ಯೋಜನೆಯಲ್ಲಿನ ರಚನಾತ್ಮಕ ಭ್ರಷ್ಟಾಚಾರವನ್ನು ಸರಿಪಡಿಸದ ಹೊರತು, ಮಂಗಳೂರು-ಕಾರ್ಕಳ ಹೆದ್ದಾರಿಯು ಅವೈಜ್ಞಾನಿಕ ಯೋಜನೆ ಮತ್ತು ಸಾರ್ವಜನಿಕ ನಿರ್ಲಕ್ಷ್ಯದಿಂದ ಸ್ಮಾರಕವಾಗಿಯೇ ಉಳಿಯಲಿದೆ.

— ಪ್ರಸನ್ನ ಶೆಟ್ಟಿ, ಸ್ಥಳೀಯರು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net