ಜಿಲ್ಲಾದ್ಯಂತ ಪುಷ್ಯಾ ಮಳೆ ಅಬ್ಬರ ಮುಂದುವರಿಕೆ

mlc channabasappa visit from rain damage home
Published on

ಶಿವಮೊಗ್ಗ: ಜಿಲ್ಲಾದ್ಯಂತ ಪುಷ್ಯಾ ಮಳೆ ಆರ್ಭಟ ಶುಕ್ರವಾರವೂ ಮುಂದುವರಿದಿದೆ. ಇಡೀ ದಿನ ಜಿಟಿಜಿಟಿ ಮಳೆಯಾಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ ಮತ್ತು ಭದ್ರಾವತಿ ತಾಲೂಕಿನಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ಕಳೆದೆರಡು ದಿನಗಳಿಂದ ಜಿಟಿಜಿಟಿ ಮಳೆಗೆ ಜನ ರೋಸಿ ಹೋಗಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದಲೇ ಶುರುವಾದ ಮಳೆ ಕಿರಿಕಿರಿ ಉಂಟುಮಾಡಿತು. ದಿನವಿಡೀ ಮೋಡ ಕವಿದ ವಾತಾವರಣ, ಥಂಡಿ ಗಾಳಿ ಜನರಲ್ಲಿ ನಡುಕ ಹುಟ್ಟಿಸಿತು. ಸತತ ಮಳೆ ಹಿನ್ನೆಲೆಯಲ್ಲಿ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೆರೆಕಟ್ಟೆಗಳು ಬಹುತೇಕ ಭರ್ತಿಯಾಗಿವೆ.

ಮುಂಗಾರು ಬಿರುಸಾಗಿದ್ದು, ಪ್ರಮುಖ ನದಿಗಳ ಹರಿವಿನಲ್ಲಿ ಏರಿಕೆಯಾಗಿದೆ. ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಸಮುದ್ರ ಮಟ್ಟದಿಂದ 1,819 ಅಡಿ ಎತ್ತರದ ಲಿಂಗನಮಕ್ಕಿ ಜಲಾಶಯದ ನೀರಿನ ಒಳಹರಿವು 60 ಸಾವಿರ ಕ್ಯೂಸೆಕ್‌ಗೂ ಅಧಿಕವಾಗಿದೆ. 4,864 ಕ್ಯೂಸೆಕ್ ಹೊರಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದ ನೀರಿನಮಟ್ಟ 1,806.40 ಅಡಿಗೆ ತಲುಪಿದ್ದು, ಭರ್ತಿಗೆ 12 ಅಡಿ ಮಾತ್ರ ಬಾಕಿ ಇದೆ.

186 ಅಡಿ ಎತ್ತರದ ಭದ್ರಾ ಜಲಾಶಯಕ್ಕೆ 20,407 ಕ್ಯೂಸೆಕ್ ಒಳಹರಿವಿದೆ. 8914 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 180.6 ಅಡಿಗೆ ತಲುಪಿದ್ದು, ಜಲಾಶಯ ಭರ್ತಿಗೆ 6 ಅಡಿ ಬಾಕಿಯಿದೆ. ಉಳಿದಂತೆ ತುಂಗಾ ಜಲಾಶಯದ ಒಳಹರಿವು 33,701 ಕ್ಯೂಸೆಕ್‌ಗೆ ಏರಿಕೆಯಾಗಿದೆ. 35,565 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಕುಸಿದ ಮನೆ ಛಾವಣಿ

ಮಳೆಯಿಂದ ಶಿವಮೊಗ್ಗದ ಅಶೋಕನಗರದಲ್ಲಿ ಕುಮಾರ್ ಎಂಬುವರ ಮನೆ ಛಾವಣಿ ಕುಸಿದಿದೆ. ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೂಡಲೇ ತಾತ್ಕಾಲಿಕ ವಸತಿ ಮತ್ತು ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಚನ್ನಬಸಪ್ಪ ಸೂಚಿಸದರು. ಕುಮಾರ್ ಅವರ ಕುಟುಂಬಕ್ಕೆ ಮಹಾನಗರ ಪಾಲಿಕೆಯಿಂದ ತಕ್ಷಣ ನೆರವು ದೊರಕುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net