

ಹೈದರಾಬಾದ್: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ-2 (Pushpa-2 ) ದಿ ರೂಲ್ ಚಿತ್ರದ ಬಿಡುಗಡೆಗೆ 20 ದಿನಗಳು ಬಾಕಿ ಉಳಿದಿದ್ದು, ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರ ಯಶಸ್ವಿಯಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಸಿನಿರಸಿಕರಿಗೆ ಪುಷ್ಪಗೆ (Pushpa-2 ) ಸಂಬಂಧಿಸಿದ ಅಪ್ಡೇಟ್ಗಳು ನಿರಂತರವಾಗಿ ದೊರೆಯುತ್ತಿದ್ದು, ಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದ್ದು, ಐಟಂ ಹಾಡಿನ ಚಿತ್ರೀಕರಣವನ್ನು ಸಹ ಮುಗಿಸಲಾಗಿದೆ. ಈ ಹಾಡಿಗೆ ಕಿಸ್ ಬೆಡಗಿ ಶ್ರೀಲೀಲಾ ಹೆಜ್ಜೆ ಹಾಕಿ, ಶ್ರೀಲೀಲಾ (Sreeleela) ಆಗಮನದಿಂದ ಚಿತ್ರತಂಡಕ್ಕೆ ಬರೋಬ್ಬರಿ 7 ಕೋಟಿ ರೂಪಾಯಿ ಉಳಿದಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಗುಂಟೂರು ಕಾರಂ ಬಂದ ನಂತರ ಶ್ರೀಲೀಲಾ (Sreeleela) ಹೆಸರು ಮತ್ತಷ್ಟು ಜನಪ್ರಿಯವಾಯಿತು. ಈ ಚಿತ್ರದಲ್ಲಿ ಅವರ ಮಾಸ್ ಸ್ಟೆಪ್ಸ್ಗೆ ಯುವಕರು ಫಿದಾ ಆಗಿದ್ದಾರೆ. ಹೀಗಾಗಿ ಪುಷ್ಪ 2 ಚಿತ್ರತಂಡಕ್ಕೆ ಅವರಿಂದ ಐಟಂ ಸಾಂಗ್ ಮಾಡಿಸುವ ಆಲೋಚನೆ ಬಂದಿತು. ಬಾಲಿವುಡ್ ನಟಿಯರಿಗೆ ಈ ಹಾಡಿಗಾಗಿ ಮೊದಲು ಅವಕಾಶ ನೀಡಲಾಗಿತ್ತು, ಆದರೆ ಅದು ಫಲಿಸಲಿಲ್ಲ. ಹೀಗಾಗಿ ಚಿತ್ರತಂಡ ಶ್ರೀಲೀಲಾ (Sreeleela) ಅವರಿಗೆ ಮಣೆ ಹಾಕಿದ್ದು, ಇದರಿಂದ ಚಿತ್ರತಂಡಕ್ಕೆ ಭರ್ಜರಿ ಹಣ ಉಳಿದಿದೆ.
ಪುಷ್ಪ-1 ನಲ್ಲಿ ನಟಿ ಸಮಂತಾ (Samantha) ಐಟಂ ಹಾಡಿಗೆ ಸೊಂಟ ಬಳುಕಿಸಿದ್ದರು. ಈ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಬಿಡುಗಡೆಗೆ ಮುಂಚೆ ಬಿಡುಗಡೆ ಆಗಿದ್ದ ಈ ಹಾಡು, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಹಾಗಾಗಿ ಪುಷ್ಪ 2 (Pushpa-2) ಸಿನಿಮಾದ ಐಟಂ ಹಾಡಿನ ಬಗ್ಗೆಯೂ ಸಹ ಚಿತ್ರತಂಡ ಗಂಭೀರವಾಗಿ ಪರಿಗಣಿಸಿದ್ದು, ಸ್ಟಾರ್ ನಾಯಕಿಯನ್ನು ಐಟಂ ಹಾಡಿಗೆ ಕರೆತರಲು ಸಾಕಷ್ಟು ಪ್ರಯತ್ನ ನಡೆಸಿತ್ತು. ಇದರಲ್ಲಿ ಪ್ರಮುಖವಾಗಿ ಬಾಲಿವುಡ್ ನಟಿಯರಾದ ಶ್ರದ್ಧಾ ಕಪೂರ್ (Shraddha Kapoor), ಕಿಯಾರಾ ಅಡ್ವಾನಿ (Kiara Advani) ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು. ಆದರೆ, ಅದು ಫಲಿಸಲಿಲ್ಲ.ಶ್ರದ್ಧಾ ಕಪೂರ್ (Shraddha Kapoor) ಹೆಸರು ಬಹುತೇಕ ಅಂತಿಮಗೊಂಡಿತ್ತಾದರು ಸಂಭಾವನೆಯ ಕಾರಣಕ್ಕೋ ಅಥವಾ ಚಿತ್ರತಂಡ ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿದ ಕಾರಣ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಯಿತು. ಶ್ರದ್ಧಾ ಕಪೂರ್, ಪುಷ್ಪ-2 (Pushpa-2) ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದರಂತೆ. ಆದರೆ ಶ್ರೀಲೀಲಾ ಒಂದು ಕೋಟಿ ರೂ. ಪಡೆದು ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಕಾರಣಕ್ಕೆ ಚಿತ್ರತಂಡ ಶ್ರೀಲೀಲಾ (Sreeleela) ಅವರಿಗೆ ಮಣೆ ಹಾಕಿತು ಎಂದು ಹೇಳಲಾಗಿದೆ.
ಸುಕುಮಾರ್ (Sukumar) ನಿರ್ದೇಶನದ ಪುಷ್ಪ-2 ಚಿತ್ರವು ಡಿಸೆಂಬರ್ 05ರಂದು ಬಿಡುಗಡೆಯಾಗುತ್ತಿದ್ದು, ಅಲ್ಲು ಅರ್ಜುನ್ (Allu Arjun) ಜೊತೆಗೆ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್, ಜಗಪತಿ ಬಾಬು, ಸುನಿಲ್ ಸೇರಿದಂತೆ ದೊಡ್ಡ ತಾರಾಗಣವಿದೆ. ಚಿತ್ರಕ್ಕೆ ದೇವಿಶ್ರೀಪ್ರಸಾದ್ ಸಂಗೀತ ಸಂಯೋಜಿಸಿದ್ದು, ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದಾರೆ.
https://www.vijayavani.net/pakistan-to-held-talks-with-bcci-amid-champions-trophy-row