

ಪರಮಹಂಸರ ಜೀವನದ ಒಂದೊಂದು ಘಳಿಗೆಯನ್ನು ಆಳವಾಗಿ ಅಧ್ಯಯನ ಮಾಡಿದಲ್ಲಿ ನಮಗೆ ಕಾಣಬರುವುದು ಅವರ ಪರಿಶುದ್ಧ ಹೃದಯ! ತಮ್ಮಲ್ಲಿಗೆ ಬರುತ್ತಿದ್ದ ಸಾಧಕರಿಗೆ ಅವರು ಬೋಧಿಸುತ್ತಿದ್ದ ಅತ್ಯಂತ ಮುಖ್ಯವಾದ ಅಂಶವೆಂದರೆ ಶುದ್ಧ ಹೃದಯ. ನಿಜವಾದ ಸಾಧಕ ಹೇಗೆ ಈ ಸ್ಥಿತಿಯನ್ನು ತಲುಪಬಹುದು ಎಂದು ಭಾವಿಸುವವರಿಗೆ ಪರಮಹಂಸರ ಸಾಧನಾ ಪರ್ವವೇ ಮಾರ್ಗದರ್ಶಿ ಎನ್ನಬಹುದು. ಕಾರಣ ಇಲ್ಲಿ ಯಾವುದೇ ಗಲಾಟೆ, ಜಾಗಟೆ, ಶಂಖನಾದ ಹಾಗೂ ಇತರ ಚಟುವಟಿಕೆಗಳ ಭರಾಟೆಯೇ ಇಲ್ಲ. ‘ಹೃದಯಕಮಲ ಮಧ್ಯೆ ರಾಜಿತಂ ನಿರ್ವಿಕಲ್ಪಂ’ ಎಂಬಂತೆ ಪರಿಶುದ್ಧ ಹೃದಯ ಮಂಟಪದಲ್ಲಿ ಭಗವಂತನನ್ನು ಇರಿಸಿಕೊಂಡು ಶಾಂತವಾಗಿ, ಮೌನವಾಗಿ, ನಿಶ್ಚಲ ಭಕ್ತಿಯಿಂದ ಸಾಧನೆ ನಡೆಸುವವನೇ ಪರಿಶುದ್ಧವಾದ ಭಕ್ತ! ಈ ವಿಚಾರವನ್ನು ಪರಮಹಂಸರು ಸರಳವಾದ ಉದಾಹರಣೆ ಮೂಲಕ ಉಪದೇಶಿಸುತ್ತಾರೆ.
‘ಮಣ್ಣನ್ನು ಚೆನ್ನಾಗಿ ಹದಮಾಡಿಕೊಳ್ಳದೆ ಇದ್ದರೆ ಮಡಕೆ ಕುಡಿಕೆ ಗಳನ್ನು ತಯಾರು ಮಾಡಲಾಗುವುದಿಲ್ಲ. ಒಳಗೆ ಮರಳು, ಕಲ್ಲು ಮಿಶ್ರಣವಾಗಿದ್ದಲ್ಲಿ ಮಡಕೆ ಬಿರುಕುಬಿಡುತ್ತದೆ. ಅದಕ್ಕಾಗಿಯೇ ಕುಂಬಾರ ಮೊದಲು ಅನೇಕ ವಿಧಗಳಲ್ಲಿ ಹದ ಮಾಡುತ್ತಾನೆ. ಹೇಗೆ ಕುಂಬಾರನು ಶುದ್ಧವಾದ ಮಣ್ಣನ್ನು ಸಿದ್ದಪಡಿಸಲು ಶ್ರಮಿಸುತ್ತಾನೆ ಯೋ ಹಾಗೆಯೇ ಭಗವದ್ ಸಾಕ್ಷಾತ್ಕಾರದ ಪಥವನ್ನು ಪಥಿಸುವ ಮೊದಲು ಮನಸ್ಸು ಪರಿಪಕ್ವವಾಗಿರುವಂತೆ ನೋಡಿಕೊಳ್ಳಬೇಕು. ತದನಂತರ ಹೃದಯ ತಾನೇ ತಾನಾಗಿ ಶುದ್ಧವಾಗುತ್ತದೆ. ಈ ಶುದ್ಧೀಕರಿಸಿದ ಮನಸ್ಸಿನಿಂದ ಭಗವದ್ ಚಿಂತನೆ, ಧ್ಯಾನ, ತಪಗಳನ್ನು ಆರಂಭಿಸಿದಾಗ ಶುದ್ಧ ಹೃದಯದ ಕಲ್ಪನೆ ಸಾಧಕರಿಗೆ ಬರಲಾರಂಭಿಸುತ್ತದೆ. ಒಮ್ಮೆ ಹೃದಯ ಶುದ್ಧಿಯಾಯಿತೆಂದರೆ ಭಗವದ್ ಶಕ್ತಿಯು ಹೃದಯಮಂಟಪದಲ್ಲಿ ವಿರಾಜಮಾನವಾಗುತ್ತದೆ’ ಎನ್ನುತ್ತಾರೆ ರಾಮಕೃಷ್ಣರು.
ಹೃದಯದಲ್ಲಿ ಪ್ರಾಪಂಚಿಕತೆಯ ಗುಡಾಣವನ್ನೇ ಇರಿಸಿಕೊಂಡು ಭಗವಂತನನ್ನು ಪ್ರಾರ್ಥಿಸಿದರೆ ಏನೂ ಪ್ರಯೋಜನಕ್ಕೆ ಬಾರದು. ಈ ಕಾರಣದಿಂದಲೇ ರಾಮಕೃಷ್ಣರು ಶುದ್ಧ ಹೃದಯ ಎಂಬ ಅಂಶವನ್ನು ಬಾರಿ ಬಾರಿ ಭಕ್ತರಿಗೆ ತಿಳಿಸುತ್ತಿದ್ದರು. ಕನ್ನಡಿಯ ಮೇಲೆ ಧೂಳು ಕವಿದಿದ್ದರೆ ಮುಖ ಕಾಣಿಸದು. ಚಿತ್ತ ಶುದ್ಧವಿಲ್ಲದಿದ್ದರೆ ಸ್ವಸ್ವರೂಪ ದರ್ಶನ ದೊರೆಯದು. ಹೃದಯ ದರ್ಪಣದ ಮೇಲೆ ನಾನಾ ರೀತಿಯ ಧೂಳು ತುಂಬಿದ್ದು ಅವುಗಳೇ ನಾನು, ನನ್ನದು ಎಂಬ ಸ್ವಾರ್ಥ. ಪ್ರಾಪಂಚಿಕ ಸುಖ-ಭೋಗಗಳೇ ಏಕಪ್ರಕಾರವಾದ ದಾಳಿ. ಅಸೂಯೆ, ದ್ವೇಷ ಇತ್ಯಾದಿಗಳೆಂಬ ಧೂಳಿನ ರಾಶಿಯೇ ತುಂಬಿರುವ ಹೃದಯ ದರ್ಪಣದಲ್ಲಿ ಭಗವತ್ ಪ್ರತಿಬಿಂಬ ಎಲ್ಲಿ ತಾನೇ ಕಂಡುಬರುತ್ತದೆ?
ಹಾಗಾದರೆ ನಿಜವಾದ ಶುದ್ಧ ಹೃದಯಿಯ ಸ್ಥಿತಿ ಹೇಗಿರುತ್ತದೆ? ಎಂದು ಪ್ರಶ್ನಿಸುವವರಿಗೆ ರಾಮಕೃಷ್ಣರು ಹೀಗೆ ತಿಳಿಸುತ್ತಾರೆ: ಯಾರು ಸದಾ ಭಗವದ್ ಚಿಂತನೆ ಮಾಡುತ್ತ, ಹಗಲಿರುಳೂ ಹೃದಯಪದ್ಮದಲ್ಲಿ ಭಗವಂತನ ಧ್ಯಾನ, ಪ್ರಾರ್ಥನೆ ಮಾಡುತ್ತಾರೋ, ಯಾರಿಗೆ ವಿಷಯ ವಸ್ತುಗಳು ಕಹಿಯಾಗಿ ತೋರುವುದೋ, ಯಾರಿಗೆ ಹರಿಪಾದಪದ್ಮ ಸುಧೆ ಹೊರತು ಬೇರೇನೂ ರುಚಿಸದೋ ಅಂತಹವರ ಸ್ವಭಾವ ನೀರು ಬೆರೆಸಿದ ಹಾಲನ್ನು ಇಟ್ಟರೆ ನೀರನ್ನು ಬಿಟ್ಟು ಹಾಲನ್ನು ಮಾತ್ರ ಕುಡಿಯುವ ಹಂಸಪಕ್ಷಿಯ ರೀತಿ ಆಗಿಬಿಟ್ಟಿರುತ್ತದೆ. ಶುದ್ಧ ಹೃದಯಿಗಳ ನಡೆಯೂ ಕೇವಲ ಭಗವಂತನೆಡೆಗೆ. ಅವರಿಗೆ ಬೇರೇನೂ ಬೇಕಿಲ್ಲ. ಅವನ ಶುದ್ಧ ಹೃದಯದಲ್ಲಿ ಭಗವಂತನ ಸ್ಪಷ್ಟ
ಚಿತ್ರ ಸದಾ ರಾರಾಜಿಸುತ್ತಿರುತ್ತದೆ. ಅವನಲ್ಲಿ ಭಗವದ್ ಶಕ್ತಿಯೇ ತುಂಬಿಕೊಂಡಿರುತ್ತದೆ. ಆತನು ಭಕ್ತಿಪರವಶನಾಗಿ ನಾರದ ಮಹರ್ಷಿಗಳು ಭಕ್ತಿಸೂತ್ರದಲ್ಲಿ ತಿಳಿಸಿರುವಂತೆ ‘ಅನಿರ್ವಚನೀಯಂ ಪ್ರೇಮಸ್ವರೂಪಂ’ (51.4.01) ಅಂದರೆ ಭಗವತ್ಪ್ರೇಮ ಅನಿರ್ವಚನೀಯವಾಗುವಂತೆ ಆ ಭಗವತ್ಪ್ರೇಮವೆಂಬ ತೀರ್ಥದಿಂದ ಹೃನ್ಮಂದಿರವನ್ನು ಶುಚಿಗೊಳಿಸಿ ತನ್ಮೂಲಕ ಭಗವಂತನನ್ನು ಸ್ಥಾಪಿಸುವಂತಾಗಬೇಕು. ಇದನ್ನೇ ರಾಮಕೃಷ್ಣರ ಸರಳವಾದ ನುಡಿಯಲ್ಲಿ ‘ಹೃದಯ ಮಂದಿರದಲ್ಲಿ ಹೃದಯಪದ್ಮವನ್ನು ಸ್ಥಾಪಿಸಿ ಭಗವಂತನನ್ನು ಜಾಗೃತಗೊಳಿಸಬೇಕು. ಆಗ ಆ ಸಾಧಕ ಯಾವುದೇ ಅಡೆತಡೆಯಿಲ್ಲದೆ ಧ್ಯಾನಸ್ಥನಾಗಿ ಧ್ಯಾನಾಮೃತದಲ್ಲಿ ತಲ್ಲೀನನಾಗುತ್ತಾನೆ. ಇದೇ ಶುದ್ಧ ಹೃದಯವನ್ನು ಹೊಂದಿದ ಭಕ್ತನ ಭಗವದಾನಂದ ಸ್ಥಿತಿ’ ಎಂದಿರುವರು.