ಅಧಿಕವಾಗಲಿದೆ ಖರೀದಿಸುವ ಶಕ್ತಿ

tth gst
ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಜಿಎಸ್‌ಟಿ ಕುರಿತು ವರ್ತಕರೊಂದಿಗೆ ಮಾಹಿತಿ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. ಆರಗ ಜ್ಞಾನೇಂದ್ರ, ಚೈತನ್ಯ ಜವಳಿ, ಹೆದ್ದೂರು ನವೀನ್ ಇದ್ದರು.
Published on

ತೀರ್ಥಹಳ್ಳಿ: ಜಿಎಸ್‌ಟಿ ಪರಿಷ್ಕರಣೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಕೊಳ್ಳುವ ಶಕ್ತಿ ಅಧಿಕವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಮಂಗಳವಾರ ಸಂಜೆ ಪಟ್ಟಣದ ಗ್ರಾಮೀಣ ಸೌಧದಲ್ಲಿ ಆಯೋಜಿಸಿದ್ದ ತೀರ್ಥಹಳ್ಳಿಯ ವರ್ತಕರಿಗೆ ಜಿಎಸ್‌ಟಿ ಮಾಹಿತಿ ಕಾರ್ಯಕ್ರಮದಲ್ಲಿ ವರ್ತಕರ ಸಮಸ್ಯೆ ಮತ್ತು ಪ್ರಶ್ನೆಗಳನ್ನು ಆಲಿಸಿದರು. ಈ ಬಗ್ಗೆ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಆಶ್ವಾಸನೆ ನೀಡಿದರು.

ಸೆ.22ರಿಂದ ಜಾರಿಗೆ ಬಂದಿರುವ ಜಿಎಸ್‌ಟಿ ಪರಿಷ್ಕರಣೆ ಜನಸ್ನೇಹಿಯಾಗಿದ್ದು, ಉಳಿತಾಯದ ಉತ್ಸವವಾಗಿದೆ. ರಾಜ್ಯ ಸರ್ಕಾರಗಳು ಇದನ್ನು ಸರಿದೂಗಿಸಿಕೊಳ್ಳುವುದು ಅನಿವಾರ್ಯ. ಮುಂದಿನ ದಿನಗಳಲ್ಲಿ ವರ್ತಕರು ಪಾರದರ್ಶಕ ವ್ಯವಹಾರ ನಡೆಸುವ ಅಗತ್ಯವಿದೆ. ಆ ಮೂಲಕ ಕ್ರಮಬದ್ಧವಾಗಿ ತೆರಿಗೆ ಪಾವತಿಸಿ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕಿದೆ. ತೆರಿಗೆ ಕದಿಯುವ ಪ್ರಯತ್ನಕ್ಕೂ ಕಡಿವಾಣ ಬೀಳಲಿದೆ ಎಂದರು.

ಜಿಲ್ಲೆಯಲ್ಲಿ ರೈಲು ಮಾರ್ಗದ ವಿಸ್ತರಣೆ ಮಾಡುವ ಅಗತ್ಯವಿದ್ದು ಈ ಬಗ್ಗೆ ಚಿಂತನೆ ನಡೆಸಲಾಗಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿ ಹಾಗೂ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಉದ್ದೇಶವಿದೆ ಎಂದು ಹೇಳಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಜಿಎಸ್‌ಟಿ ಪರಿಷ್ಕರಣೆ ದಾಖಲೆಯ ಕಾರ್ಯ. ದೇಶದ ಇತಿಹಾಸದಲ್ಲಿ ಒಮ್ಮೆ ನಿಗದಿ ಪಡಿಸಿದ ತೆರಿಗೆಯನ್ನು ಇಳಿಸಿದ ಉದಾಹರಣೆಯೇ ಇಲ್ಲ. ಇದರಿಂದ ದಿನಬಳಕೆ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಕೇಂದ್ರದ ಈ ಕ್ರಮ ಸಾಮಾನ್ಯರ ಬದುಕಿಗೆ ಪೂರಕವಾಗಿದೆ ಎಂದರು.

ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ವರ್ತಕರ ಸಂಘದ ಅಧ್ಯಕ್ಷ ಚೈತನ್ಯ ಜವಳಿ, ಕಾರ್ಯದರ್ಶಿ ಡಾನ್ ರಾಮಣ್ಣ ಶೆಟ್ಟಿ, ಪಪಂ ಸದಸ್ಯ ಸಂದೇಶ್ ಜವಳಿ, ಹೊದಲ ಬಸವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net