ಕಾನೂನು ಮಾಪನಶಾಸ್ತ್ರ ಇಲಾಖೆ ಬಲವರ್ಧನೆಗೆ ವಾಹನ, ಕಂಪ್ಯೂಟರ್ ಖರೀದಿ, ಖಾಲಿ ಹುದ್ದೆ ಭರ್ತಿ

kh muniyappa
Published on

ಬೆಂಗಳೂರು: ಕಾನೂನು ಮಾಪನ ಶಾಸ್ತ್ರ ಇಲಾಖೆಯಲ್ಲಿ ಒಟ್ಟು 500 ಹುದ್ದೆಗಳಲ್ಲಿ 200ಜನರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು ಇನ್ನೂ 300 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿಮಾಡಿಕೊಳ್ಳಲು ತಕ್ಷಣವೇ ಕ್ರಮಕೈಗೊಳ್ಳಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಕಾಸ ಸೌಧದಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ದೈನಂದಿನ ವ್ಯವಹಾರದಲ್ಲಿನ ತೂಕ ಮತ್ತು ಅಳತೆಯಲ್ಲಿ ನಿಖರತೆಯನ್ನ ಕಾಪಾಡುವ ಮೂಲಕ ಗ್ರಾಹಕರ ಹಿತರಕ್ಷಣೆ ಮಾಡುತ್ತಿರುವ ಕಾನೂನು ಮಾಪನಶಾಸ್ತ್ರ ಇಲಾಖೆಯ ಸದೃಢಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು. ಪರಿಶೀಲನಾ ಕಾರ್ಯಕ್ಕೆ ವಾಹನ ಬೇಕು ಎಂಬ ಬೇಡಿಕೆ ಇದ್ದು, ತಕ್ಷಣವೇ ವ್ಯವಸ್ಥೆ ಮಾಡಲಾಗುತ್ತದೆ. ನೂರು ಕಂಪ್ಯೂಟರ್ ಅಗತ್ಯವಿದೆ ಅದನ್ನೂ ಶೀಘ್ರ ಪೂರೈಸಲಾಗುತ್ತದೆ. ನೇಮಕವನ್ನು ಆರು ತಿಂಗಳೊಳಗೆ ಪೂರೈಸಲಾಗುತ್ತದೆ ಮತ್ತು ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಹಳ ವರ್ಷದಿಂದ ಬಡ್ತಿ ನೀಡಿಲ್ಲ. ಆದಷ್ಟು ಬೇಗ ನಿಯಮಾನುಸಾರ ಬಡ್ತಿ ನೀಡಲಾಗುವುದು ಎಂದರು. ಇಲಾಖೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದರ ಮೂಲಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿ ಸಾರ್ವಜನಿಕರಿಗೆ ನ್ಯಾಯ ಒದಗಿಸಲಾಗುವುದು ಎಂದು ಅವರು ಹೇಳಿದರು.

500 ಕೋಟಿ ರಾಜಸ್ವ ಸಂಗ್ರಹ ಗುರಿ

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮೂಲಕ 100 ಕೋಟಿ ರಾಜಸ್ವ ಸಂಗ್ರಹಿಸಲಾಗುತ್ತಿದೆ. ಪ್ರಸಕ್ತ ವರ್ಷ 500 ಕೋಟಿ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ ಎಂದು ಸಚಿವ ಮುನಿಯಪ್ಪ ಇದೇ ವೇಳೆ ತಿಳಿಸಿದರು.

ಇಲಾಖೆಯು ಈ ಮೊದಲು 137 ಖಾಸಗಿ ಕಟ್ಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 92 ಸ್ವಂತ ಕಚೇರಿಗಳನ್ನು ಹೊಂದಲಾಗಿದೆ. ಇನ್ನುಳಿದ 45 ಕಛೇರಿಗಳಿಗೂ ಸ್ವಂತ ಕಟ್ಟಡ ಹೊಂದುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.

ಇಲಾಖೆಯು ಇ-ಮಾಪನ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವಲ್ಲಿ ರಾಜ್ಯವು ದೇಶದಲ್ಲಿ ಪ್ರಪ್ರಥಮವಾಗಿರುತ್ತದೆ. ಈ ತಂತ್ರಾಂಶವನ್ನು ಮತ್ತಷ್ಟು ಮೇಲ್ದರ್ಜೇಗೇರಿಸಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಾರ್ಯದರ್ಶಿ ಪ್ರಕಾಶ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಂಟ್ರೋಲರ್ ಅನಿತಾಲಕ್ಷ್ಮೀ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net