

ಬೆಂಗಳೂರಿನ ವಿಧಾನಸೌಧದ ಸಚಿವರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಷ್ಕರಣೆ ದರವು ಮಾ.೨೦ರಿಂದ ಮೇ ೩೧ರ ತನಕ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದರು.
ಈಗ ಪ್ರತಿ ಲೀಟರ್ಗೆ ಖರೀದಿಗೆ 31.40 ರೂ. ನೀಡಲಾಗುತ್ತಿತ್ತು, ಈಗ ಪರಿಷ್ಕರಿಸಿ 2 ರೂ. ಏರಿಕೆ ಮಾಡಿದ್ದು, ಪ್ರಾಥಮಿಕ ಹಾಲು ಸಹಕಾರ ಸಂಘಕ್ಕೆ 35.80 ರೂ. ಹಾಗೂ ರೈತರಿಗೆ 33.40 ರೂ. ನೀಡಲಾಗುತ್ತದೆ. ಜತೆಗೆ ಸರ್ಕಾರ ನೀಡುವ ಪ್ರೋತ್ಸಾಹಧನ ೫ ರೂ. ಸೇರಿ 38.40 ರೂ. ಸಿಕ್ಕಿದಂತಾಗುತ್ತದೆ ಎಂದರು.
ಜಿಲ್ಲೆಯಯಲ್ಲಿ ಒಕ್ಕೂಟಕ್ಕೆ 6.64 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಗುಣಮಟ್ಟವೂ ಶೇ.೮೫ ರಿಂದ ೯೫ಕ್ಕೆ ವೃದ್ಧಿಯಾಗುತ್ತಿದೆ. ಒಟ್ಟು ಹಾಲಿನ ಉತ್ಪಾದನೆ ಪೈಕಿ ಸ್ಯಾಚೆ ಹಾಲು ಮಾರಾಟ ಗರಿಷ್ಠ 3.73 ಲಕ್ಷ ಲೀಟರ್ ಇದೆ. ಮೊಸರು 95 ಸಾವಿರ ಲೀಟರ್, ಯುಎಚ್ಟಿ ಹಾಲು 2.98 ಲಕ್ಷ ಲೀಟರ್ ಮಾರಾಟವಾಗುತ್ತಿದೆ. ಅಂತೆಯೇ, ನಂದಿನ ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದರು.
ಹಾಲಿನ ದರ ಪರಿಷ್ಕರಣೆಯಿಂದ ಮೂರು ತಿಂಗಳಿಗೆ ಒಟ್ಟು 9 ಕೋಟಿ ರೂ. ವೆಚ್ಚವಾಗುತ್ತದೆ. ರೈತರ ಹಿತದೃಷ್ಟಿಯಿಂದ ದರ ಏರಿಕೆ ಮಾಡಿ ತೀರ್ಮಾನ ಕೈಗೊಂಡಿದ್ದು, ಹೈನೋದ್ಯಮಕ್ಕೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಬಾಕಿ 5 ರೂ. ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಜೀರ್ ಅಹ್ಮದ್, ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಒಕ್ಕೂಟದ ಆಡಳಿತಾಽಕಾರಿ ಡಾ.ಎಚ್.ಪಿ.ಎಸ್.ಮೈತ್ರಿ, ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ವ್ಯವಸ್ಥಾಪಕರಾದ ನಾಗೇಶ್, ಡಾ.ಚೇತನ್ ಉಪಸ್ಥಿತರಿದ್ದರು.
* ಹಸಿರು ಮೇವು ಉತ್ಪಾದನೆಗೆ ಪ್ರೋತ್ಸಾಹ
ಬೇಸಿಗೆಯಲ್ಲಿ ರಾಸುಗಳಿಗೆ ಮೇವಿನ ಕೊರತೆ ನೀಗಿಸಲು ಕ್ರಮವಹಿಸಿದ್ದು, ಮೇವು ಬೆಳೆಯಲು ಒಂದು ಎಕರೆಗೆ ೩ ಸಾವಿರ ರೂ. ಪ್ರೋತ್ಸಾಹ ನೀಡಲಾಗುತ್ತಿದೆ. ಜತೆಗೆ ಎ.ಟಿ.ಜೋಳ, ಎಸ್.ಎಸ್.ಜಿ. ಜೋಳ, ಸಿ.ಎಸ್.ಎಚ್.-24, ಮತ್ತು ಸಿಒಎಫ್ಎಸ್-29 ಬಹುವಾರ್ಷಿಕ ಮೇವಿನ ಬೀಜಗಳನ್ನು ರೈತರಿಗೆ ಶೇ.೫೦ ರಿಯಾಯಿತಿಯಲ್ಲಿ ನೀಡಲಾಗುತ್ತಿದೆ. ಕೋಮುಲï ಚಟುವಟಿಕೆಗಳಿಂದ ವಾರ್ಷಿಕ 5 ಕೋಟಿ ರೂ. ಲಾಭದಲ್ಲಿದೆ ಎಂದು ಸಚಿವರು ವಿವರಿಸಿದರು.
* ಎಎಂಸಿಯು ಅಳವಡಿಕೆಗೆ ಕ್ರಮ
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ನಿರ್ದೇಶನದಂತೆ ಹಾಲು ಉತ್ಪಾದಕರಿಗೆ ಜಿಡ್ಡಿನ ಪರೀಕ್ಷೆ ಆಧಾರದ ಮೇಲೆ ಉತ್ಪಾದಕರಿಗೆ ಹೆಚ್ಚಿನ ದರ ಲಭಿಸುವಂತೆ ಒಕ್ಕೂಟದ ವ್ಯಾಪ್ತಿಯ 225 ಸಂಘಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಎಎಂಸಿಯು ಅಳವಡಿಸಲು ಕ್ರಮವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
* 7.50 ಲಕ್ಷ ಲೀಟರ್ ಉತ್ಪಾದನೆ ಗುರಿ
2025-26ನೇ ಸಾಲಿನಲ್ಲಿ ಒಕ್ಕೂಟವು ೭.೫೦ ಲಕ್ಷ ಲೀಟರ್ ಹಾಲು ಶೇಖರಣೆಯ ಗುರಿ ಹೊಂದಲಾಗಿದೆ. ಹಾಲು ಉತ್ಪಾದಕರ ಸಂಘಗಳು, ಒಕ್ಕೂಟದ ಹಿತದೃಷ್ಟಿಯಿಂದ ಹಾಲು ಶೇಖರಣೆ ಮತ್ತು ಗುಣಮಟ್ಟ ಪ್ರೋತ್ಸಾಹಿಸಲು ಹಾಲು ಉತ್ಪಾದಕರ ನೆರವಿಗೆ ಒಕ್ಕೂಟ ಮುಂಚೂಣಿಯಲ್ಲಿದೆ. ಪರಿಸ್ಥಿತಿ ಮನಗಂಡು ಶೇ.4 -ಫ್ಯಾಟ್, ಶೇ.೮.೫ ಎಸ್.ಎನ್.ಎಫ್. ಅಂಶವುಳ್ಳ ಲೀಟರ್ ಹಾಲಿಗೆ 2 ರೂ. ಹೆಚ್ಚಿಸಲಾಗಿದೆ. ರಾಜ್ಯದ ಎಲ್ಲ ಹಾಲು ಒಕ್ಕೂಟಗಳ ಹಾಲಿನ ಖರೀದಿ ದರಕ್ಕಿಂತ ಕೋಲಾರ ಹಾಲು ಒಕ್ಕೂಟವು ಅತಿ ಹೆಚ್ಚಿನ ಖರೀದಿ ಬೆಲೆ ನೀಡುತ್ತಿದೆ ಎಂದು ಬೈರತಿ ಸುರೇಶ್ ಹೇಳಿದರು.
ಬಾಕ್ಸ್...
34 ಹೊಸ ಸಂಘ ರಚನೆ
ಕೋಲಾರ-ಚಿಕ್ಕಬಳ್ಳಾಪುರ ಒಕ್ಕೂಟ ವಿಭಜನೆ ನಂತರ, ಒಕ್ಕೂಟದ ಆಡಳಿತಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್ ಅವರ ಶ್ರಮದಿಂದ ಜಿಲ್ಲೆಯಲ್ಲಿ 34 ಹೊಸ ಪ್ರಾಥಮಿಕ ಸಂಘಗಳ ರಚನೆ ಮಾಡಿಸಿದ್ದು, ಕರ್ನಾಟಕ ಹಾಲು ಮಹಾಮಂಡಳಿ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಸಂಘಗಳನ್ನು ಮಾಡಿರುವ ಪ್ರಶಂಸೆಗೆ ಒಳಪಟ್ಟಿದ್ದಾರೆ ಎಂದು ಶ್ಲಾಘಿಸಿದರು.