ಶಾಲೆಗಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಖರೀದಿ, ಆದೇಶವೇ ನಕಲಿ..!

Vidhanasoudha
Published on

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ನಕಲಿ ಸಹಿ ಮಾಡಿ ಆದೇಶ ಪತ್ರ ಹೊರಡಿಸಿರುವುದು ಬೆಳಕಿಗೆ ಬಂದಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ(ಆಡಳಿತ) ಮಲ್ಲಿಕಾರ್ಜುನ ರಾಮಚಂದ್ರಪ್ಪ, ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸಹಿ ನಕಲಿ ಮಾಡಿ ಆದೇಶ ಪ್ರತಿಯನ್ನು ಕಿಡಿಗೇಡಿಗಳು ಹೊರಡಿಸಿದ್ದರು. ಆ ಆದೇಶದಲ್ಲಿ ಶಾಲೆಗಳಲ್ಲಿ ಅಳವಡಿಸುವ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ದೇಶಪಾಂಡೆ ಸರ್ವೀಸಸ್ ಕಂಪನಿಯಿಂದ ಖರೀದಿ ಮಾಡಬೇಕೆಂದು ಉಲ್ಲೇಖವಾಗಿತ್ತು. ಈ ಆದೇಶ ಪ್ರತಿ ರಾಜ್ಯದ ಎಲ್ಲ ಉಪ ನಿರ್ದೇಶಕರಿಗೆ ಎಂದು ನಮೂದಿಸಿ ನಿರ್ದೇಶನ ನೀಡಲಾಗಿತ್ತು.

ಈ ನಕಲಿ ಆದೇಶ ಪ್ರತಿಯನ್ನು ಇಟ್ಟುಕೊಂಡು ವಂಚನೆ ಮಾಡಲು ಕಿಡಿಗೇಡಿಗಳು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net