

ತಿರುಮಲ: ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ಅಪಾರ ದೇಣಿಗೆ ಬಂದಿದೆ. ಕಲಿಯುಗದ ಜೀವಂತ ದೇವರಾದ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ.
ಶ್ರೀವಾರಿ ದರ್ಶನದ ನಂತರ ಹುಂಡಿಗಳಲ್ಲಿ ಕಾಣಿಕೆ ಸಲ್ಲಿಸಿ ಪೂಜೆ ಸಲ್ಲಿಸುತ್ತಾರೆ. ಇನ್ನು ಕೆಲವು ಭಕ್ತರು ಟಿಟಿಡಿಗೆ ದೇಣಿಗೆ ನೀಡಿ ಶ್ರೀವಾರಿ ಕೃಪೆಗೆ ಪಾತ್ರರಾಗುತ್ತಾರೆ. ಇತ್ತೀಚೆಗಷ್ಟೇ ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಟಿಟಿಡಿಯ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್ಗೆ ಭಾರಿ ದೇಣಿಗೆ ಬಂದಿದೆ. ಪಂಜಾಬ್ ಮೂಲದ ಉದ್ಯಮಿಯೊಬ್ಬರು ಟಿಟಿಡಿಗೆ 21 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಗಂಭೀರ ಸ್ವರೂಪದ ಕಾಯಿಲೆಯುಳ್ಳ ಬಡ ರೋಗಿಗಳಿಗೆ ಎಸ್.ವಿ ಪ್ರಾಣದಾನ ಟ್ರಸ್ಟ್ ಯೋಜನೆ ಅಡಿಯಲ್ಲಿ ಟಿಟಿಡಿ ಮುನ್ನಡೆಸುವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
ಭಾನುವಾರ ರಾತ್ರಿ ಪ್ರಕಟಣೆ ಹೊರಡಿಸಿರುವ ಟಿಟಿಡಿ ಆಡಳಿತ ಮಂಡಳಿ, ಪಂಜಾಬ್ ಮೂಲದ ರಾಜಿಂದರ್ ಗುಪ್ತಾ ಅವರು 21 ಕೋಟಿ ರೂಪಾಯಿ ಹಣವನ್ನು ಪ್ರಾಣದಾನ ಟ್ರಸ್ಟ್ಗೆ ನೀಡಿದ್ದಾರೆ. ಚೆಕ್ನ್ನು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ ವೆಂಕಯ್ಯ ಚೌಧರಿ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಿದೆ.