

ಬೆಂಗಳೂರು: ‘ಊರಲ್ಲಿ ಇಲ್ಲದಿರುವುದರಿಂದ ಅಭಿಮಾನಿಗಳ್ಯಾರೂ ಮನೆಯ ಹತ್ತಿರ ಬರುವುದು ಬೇಡ, ಈ ಬಾರಿ ಹುಟ್ಟುಹಬ್ಬವಿರುವುದಿಲ್ಲ' ಎಂದು ಒಂದು ವಾರದ ಮುಂಚೆಯೇ ಹೇಳಿಬಿಟ್ಟಿದ್ದರು ಪುನೀತ್ ರಾಜಕುಮಾರ್. ಅದಕ್ಕೆ ಸರಿಯಾಗಿ, ಬುಧವಾರ (ಮಾರ್ಚ್ 17) ಪುನೀತ್ ಹುಟ್ಟುಹಬ್ಬದ ಸಂಭ್ರಮ ಅವರ ಮನೆಯ ಬಳಿ ಕಾಣಲಿಲ್ಲ.
ಮನೆಯೆದುರು ಸಂಭ್ರಮವಿಲ್ಲದಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ಹುಟ್ಟುಹಬ್ಬದ್ದೇ ಹವಾ. ಪುನೀತ್ ಅವರ ಹಲವು ಅಭಿಮಾನಿಗಳು ಕಾಮನ್ ಡಿಸ್ಪ್ಲೇ ಪಿಕ್ಚರ್ಗಳನ್ನು (ಸಿಡಿಪಿ) ಹಂಚಿಕೊಂಡು ಸಂಭ್ರಮಿಸಿದರೆ, ಇನ್ನೂ ಹಲವರು ಪುನೀತ್ ಅಭಿನಯದ ಹಲವು ಚಿತ್ರಗಳ ಪೋಸ್ಟರ್ಗಳನ್ನು, ಅವರ ಬಾಲ್ಯದ ಫೋಟೋಗಳನ್ನು ಶುಭ ಹಾರೈಸುವುದಕ್ಕೆ ಬಳಸಿಕೊಂಡರು.
ಇನ್ನು, ದರ್ಶನ್, ಶ್ರೀಮುರಳಿ, ರಶ್ಮಿಕಾ ಮಂದಣ್ಣ, ಗಣೇಶ್, ರಕ್ಷಿತ್ ಶೆಟ್ಟಿ, ಅರ್ಜುನ್ ಜನ್ಯ, ಅನು ಪ್ರಭಾಕರ್, ಸಾಯಿಕುಮಾರ್, ರಿಷಬ್ ಶೆಟ್ಟಿ, ಧನಂಜಯ್ ಸೇರಿ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಪುನೀತ್ಗೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಪುನೀತ್ ಅಭಿನಯದ ‘ಯುವರತ್ನ’, ‘ಜೇಮ್್ಸ’ ಮತ್ತು ಕೃಷ್ಣ ಅಭಿನಯದ ‘ಪ್ರೊಡಕ್ಷನ್ ನಂಬರ್ 2’ ಚಿತ್ರದ ಹೊಸ ಪೋಸ್ಟರ್ಗಳು ಬಿಡುಗಡೆಯಾಗಿವೆ.
ಜಗ್ಗೇಶ್ ಮನೆಯಲ್ಲಿ ಪೂಜೆ: ಮಾರ್ಚ್ 17ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುವ ಕನ್ನಡ ಚಿತ್ರರಂಗದ ಮತ್ತೊಬ್ಬ ನಟ ಎಂದರೆ ಅದು ನವರಸ ನಾಯಕ ಜಗ್ಗೇಶ್. ಪ್ರತಿ ವರ್ಷ ವಿಶೇಷ ಪೂಜೆ ಮತ್ತು ಹೋಮ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಜಗ್ಗೇಶ್, ಈ ಬಾರಿ ಸಹ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದರು. ಈ ಪೂಜೆಯಲ್ಲಿ ಅವರ ಕುಟುಂಬವರ್ಗದವರು ಮತ್ತು ಹಿತೈಷಿಗಳು ಭಾಗವಹಿಸಿ, ಶುಭ ಹಾರೈಸಿದ್ದಾರೆ. ಇನ್ನು, ಚಿತ್ರರಂಗದ ವತಿಯಿಂದ ದರ್ಶನ್ ಸೇರಿ ಹಲವರು ಜಗ್ಗೇಶ್ಗೆ
ಶುಭ ಹಾರೈಸಿದ್ದು, ಅವರ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ. ಇತ್ತೀಚೆಗಷ್ಟೇ ‘ತೋತಾಪುರಿ’ ಚಿತ್ರದ ಚಿತ್ರೀಕರಣವನ್ನು ಜಗ್ಗೇಶ್ ಮುಗಿಸಿದ್ದು, ಸದ್ಯದಲ್ಲೇ ಗುರುಪ್ರಸಾದ್ ನಿರ್ದೇಶನದ ‘ರಂಗನಾಯಕ’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಆ ಎರಡೂ ತಂಡಗಳು ಜಗ್ಗೇಶ್ಗೆ ಶುಭಹಾರೈಸಿ, ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡಿವೆ.