ಅಭಿಮಾನ ಎಂದರೆ ಆತ್ಮಹತ್ಯೆಯಲ್ಲ: ರಾಘವೇಂದ್ರ ರಾಜ್‌ಕುಮಾರ್ ಬೇಸರ ಮೃತ ಪುನೀತ್ ಅಭಿಮಾನಿ ಮನೆಗೆ ಭೇಟಿ

7-cpt-1
Published on

ಚನ್ನಪಟ್ಟಣ : ನಟ ಪುನೀತ್ ರಾಜ್‌ಕುವಾರ್ ನಿಧನದ ನೋವು ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಮೃತ ವೆಂಕಟೇಶ್ ನಿವಾಸಕ್ಕೆ ಪುನೀತ್ ಸೋದರ ರಾಘವೇಂದ್ರ ರಾಜ್‌ಕುಮಾರ್ ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಗರದ ಎಲೆಕೇರಿ ನಿವಾಸಿ ಅಪ್ಪು ಅಭಿಮಾನಿ ವೆಂಕಟೇಶ್ (25) ಅ.29ರಂದು ಪುನೀತ್ ನಿಧನದ ಸುದ್ದಿ ಕೇಳಿ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದ. ಕಳೆದ ಗುರುವಾರ ಮುಂಜಾನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಈ ವಿಚಾರ ತಿಳಿದ ರಾಘವೇಂದ್ರ ರಾಜ್‌ಕುಮಾರ್ ಮೃತನ ನಿವಾಸಕ್ಕೆ ಭೇಟಿ ನೀಡಿ ಮೃತನ ತಾಯಿ ಮತ್ತು ಸಹೋದರರಿಗೆ ಸಾಂತ್ವನ ಹೇಳಿದರು.

ಮೃತನ ತಾಯಿ ಸರೋಜಮ್ಮ ಮತ್ತು ಸಹೋದರಿಯರಿಗೆ ಧೈರ್ಯ ಹೇಳಿದ ರಾಘವೇಂದ್ರ, ವೆಂಕಟೇಶ್ ಸಹ ನನ್ನ ಸಹೋದರನಂತೆ, ಅವನ ಅಗಲಿಕೆಯ ನೋವಿಗೆ ನಮ್ಮ ಕುಟುಂಬ ಸಹ ನಿಮ್ಮ ಜತೆ ಇರಲಿದೆ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಬಂದಾಗ ತಪ್ಪದೇ ನಿಮ್ಮ ಮನೆಗೆ ಭೇಟಿ ನೀಡುತ್ತೇನೆ. ನಿಮ್ಮ ಕಷ್ಟ-ಸುಖಗಳಿಗೆ ನಮ್ಮ ಕುಟುಂಬ ಜತೆಗೆ ಇರಲಿದೆ ಎಂದು ಧೈರ್ಯ ತುಂಬಿದರು. ಸೋಮವಾರ ನಡೆಯಲಿರುವ ಪುಣ್ಯಸ್ಮರಣೆಗೆ ಎಲ್ಲರೂ ಬನ್ನಿ ಎಂದು ಆಹ್ವಾನಿಸಿದರು.

ನೋವಿನ ಮೇಲೆ ನೋವು ಬೇಡ :  ಕುಟುಂಬಸ್ಥರೊಂದಿಗೆ ಕೆಲ ಕಾಲ ಕಳೆದ ರಾಘವೇಂದ್ರ ರಾಜ್‌ಕುಮಾರ್, ಪುನೀತ್ ಅವರನ್ನು ಕಳೆದುಕೊಂಡು ನಮ್ಮ ಕುಟುಂಬ ಸಾಕಷ್ಟು ನೋವಿನಲ್ಲಿದೆ. ಇದರೊಂದಿಗೆ ಅಭಿಮಾನಿಗಳ ಆತ್ಮಹತ್ಯೆ ಇನ್ನಷ್ಟು ನೋವುಂಟು ವಾಡುತ್ತಿದೆ. ಇಂತಹ ವಿಷಾದನೀಯ ಸ್ಥಿತಿಯಲ್ಲಿ ಅಭಿವಾನಿಗಳು ಧೈರ್ಯಗೆಡಬಾರದು, ತಾಳ್ಮೆ ತೆಗೆದುಕೊಳ್ಳಬೇಕು. ಪುನೀತ್ ಅವರೂ ಸಹ ಅಭಿಮಾನಿಗಳ ಆತ್ಮಹತ್ಯೆಯನ್ನು ಸಹಿಸೋಲ್ಲ. ಅವರ ಆತ್ಮಕ್ಕೆ ಶಾಂತಿ ಲಭಿಸಬೇಕು ಎಂದರೆ, ಅವರ ಆದರ್ಶಗಳು ಹಾಗೂ ಸಾಮಾಜಿಕ ಮೌಲ್ಯಗಳನ್ನು ಪಾಲಿಸಬೇಕು. ಅಭಿಮಾನ ಎಂದರೆ, ಅವರ ಹೆಸರನ್ನು ಶಾಶ್ವತಗೊಳಿಸುವುದೇ ಹೊರತು ಆತ್ಮಹತ್ಯೆ ಮಾಡಿಕೊಳ್ಳುವುದಲ್ಲ ಎಂದರು.

ಹಲವೆಡೆ ಪುನೀತ್ ಪುಣ್ಯಸ್ಮರಣೆ : ಚನ್ನಪಟ್ಟಣ ನಟ ಪುನೀತ್ ರಾಜ್‌ಕುಮಾರ್ ನಿಧನರಾಗಿ ಸೋಮವಾರಕ್ಕೆ 11 ದಿನ ಪೂರೈಸಲಿದ್ದು, ತಾಲೂಕಿನ ಹಲವೆಡೆ ನೆಚ್ಚಿನ ನಟನ 11ನೇ ದಿನದ ಕಾರ್ಯವನ್ನು ಅಭಿಮಾನಿಗಳು ಭಾನುವಾರವೇ ನಡೆಸಿದರು. ತಾಲೂಕಿನ ತಿಟ್ಟವಾರನಹಳ್ಳಿ ಗ್ರಾಮಸ್ಥರು ಊರ ಮುಂಭಾಗ ಪುನೀತ್ ರಾಜ್‌ಕುಮಾರ್ ಕಟೌಟ್‌ಗೆ ಪೂಜೆ ಸಲ್ಲಿಸಿ, ಪುನೀತ್ ಅವರು ಬಹಳ ಇಷ್ಟಪಡುತ್ತಿದ್ದ ಬಿರಿಯಾನಿ ನೇವೈದ್ಯವಿಟ್ಟು ಅಂತಿಮ ನಮನ ಸಲ್ಲಿಸಿದರು.

ಗ್ರಾಮಸ್ಥರು ಹಾಗೂ ಅಭಿವಾನಿಗಳು ಒಗ್ಗೂಡಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿಗೆ ಬಿರಿಯಾನಿ ವಿತರಿಸಲಾಯಿತು. ಈ ವೇಳೆ ಅಭಿಮಾನಿ ಬಾಬು ಎಂಬಾತ ಕೇಶಮುಂಡನ ಮಾಡಿಸಿಕೊಂಡು ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿತ್ತು.

ವಾಲೇತೋಪಿನಲ್ಲಿ ನಾಟಿಕೋಳಿ ನೈವೇದ್ಯ: ತಾಲೂಕಿನ ವಾಲೆತೋಪು ಗ್ರಾಮದಲ್ಲೂ ಪವರ್ ಸ್ಟಾರ್ ಬ್ರಿಗೇಡ್ ವತಿಯಿಂದ ಪುನೀತ್ ಭಾವಚಿತ್ರದ ಎದುರು ಬಿರಿಯಾನಿ ಹಾಗೂ ನಾಟಿ ಕೋಳಿ ಸಾರು ಎಡೆಯಿಟ್ಟು ಪೂಜೆ ಸಲ್ಲಿಸಿ ಗ್ರಾಮಸ್ಥರಿಗೂ ಹಂಚಿ ಅಭಿವಾನ ವ್ಯಕ್ತಪಡಿಸಿದರು. ಗ್ರಾಮದ ಪವರ್ ಸ್ಟಾರ್ ಬ್ರಿಗೇಡ್‌ನ ಪದಾಧಿಕಾರಿಗಳು ನಟನ ಸಾವಿಗೆ ಕಂಬನಿ ಮಿಡಿದು, ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net