

ಪುಣೆ: ಪುಣೆಯ ಸ್ವಾರ್ಗೇಟ್ ಬಸ್ ನಿಲ್ದಾಣದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೋರ್ಟ್ ಮಾರ್ಚ್ 12ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.
ಆರೋಪಿಯನ್ನು ಫೆಬ್ರವರಿ 28ರಂದು ಪುಣೆಯ ಶಿರೂರಿನಲ್ಲಿ ಡ್ರೋನ್ ಹಾಗೂ ಸ್ನಿಫರ್ ಡಾಗ್ಗಳ ಸಹಾಯದೊಂದಿಗೆ ಬಂಧಿಸಲಾಗಿದ್ದು, ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಈ ಪ್ರಕರಣ ಕುರಿತು ಆರೋಪಿ ಪರ ವಕೀಲ (Lawyer) ವಿವಾದಾತ್ಮಕ ಹೇಳಿಕೆ ನೀಡಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಪ್ರಕರಣದ ಕುರಿತು ಮಾತನಾಡಿರುವ ಆರೋಪಿ ಪರ ವಕೀಲ (Lawyer) ವಾಜಿದ್ ಖಾನ್, ಬಲವಂತವಾಗಿ ಏನೂ ಆಗಿಲ್ಲ, ಸಹಮತದೊಂದಿಗೆ ಎಲ್ಲವೂ ನಡೆದಿದೆ. ಒಂದು ವೇಳೆ ಪೊಲೀಸರು ಆರೋಪಿಸುವ ರೀತಿ ಆಗಿದ್ದರೆ ಮಹಿಳೆ ಸಹಾಯಕ್ಕಾಗಿ ಕೂಗಿಕೊಳ್ಳಬಹುದಿತ್ತು. ಏನೇ ನಡೆದಿದ್ದರೂ ಅದು ಇಬ್ಬರ ನಡುವಿನ ಒಪ್ಪಿಗೆಯ ನಂತರವೇ ಸಂಭವಿಸಿದೆ ಎಂದು ಆರೋಪಿ ಪರ ವಕೀಲ ವಾಜಿದ್ ಖಾನ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಫೆಬ್ರವರಿ 26ರ ಬೆಳಗಿನ ಜಾವ 5.45 ರ ಸುಮಾರಿಗೆ ಪಕ್ಕದ ಸತಾರ ಜಿಲ್ಲೆಯ ಫಾಲ್ಟನ್‌ಗೆ ಹೋಗುವ ಬಸ್‌ಗಾಗಿ ಒಂದು ಪ್ಲಾಟ್‌ಫಾರ್ಮ್‌ನಲ್ಲಿ ಮಹಿಳೆಯೊಬ್ಬರು ಕಾಯುತ್ತಿದ್ದಾಗ, ಒಬ್ಬ ವ್ಯಕ್ತಿ ಹತ್ತಿರ ಬಂದು ಅವಳನ್ನು ಅಕ್ಕಾ ಎಂದು ಕರೆದು ಮಾತನಾಡಲು ಶುರು ಮಾಡಿದ್ದ, ಆರೋಪಿಯು ತಾನು ಬಸ್ನ ನಿರ್ವಾಹಕ ಎಂದು ಹೇಳಿ ಸತಾರಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿ ಆಕೆಯನ್ನು ಖಾಲಿ ಬಸ್ನೊಳಗೆ ಆರೋಪಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ.
ಘಟನೆಯು ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಆತನ ಸುಳಿವೂ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನವನ್ನ ಘೋಷಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ.