

ಹನೂರು: ತಾಲೂಕಿನ ಮಾರಳ್ಳಿ ಗ್ರಾಮದ ಬಳಿ ಸೋಮವಾರ ಸಾರಿಗೆ ಬಸ್ ಟಯರ್ ಪಂಕ್ಚರ್ ಆದ ಪರಿಣಾಮ ಪ್ರಯಾಣಿಕರು ಕಾದು ನಿಂತು ತೊಂದರೆ ಅನುಭವಿಸಿದರು.
ಬೆಳಗ್ಗೆ 9.30ರ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಹನೂರಿನಿಂದ ರಾಮಾಪುರ ಮಾರ್ಗವಾಗಿ ಹೂಗ್ಯಂಗೆ ತೆರಳುತ್ತಿತ್ತು. ಕೆಲಸ ಕಾರ್ಯಗಳ ನಿಮಿತ್ತ ಹನೂರು, ರಾಮಾಪುರಕ್ಕೆ ತೆರಳಿದ್ದ ದಿನ್ನಳ್ಳಿ, ಗಾಜನೂರು, ಕೊಪ್ಪ, ಸತ್ಯಮಂಗಲ, ಮಿಣ್ಯಂ ಹಾಗೂ ಈ ಭಾಗದ ಇನ್ನಿತರ ಗ್ರಾಮದ ಜನರು ತಮ್ಮ ಗ್ರಾಮಗಳಿಗೆ ಹೊರಟಿದ್ದರು. ಆದರೆ ಮಾರಳ್ಳಿ ಗ್ರಾಮದ ಬಳಿ ಬಸ್ ಟಯರ್ ಪಂಕ್ಚರ್ ಆಗಿದೆ. ಆದರೆ ಮತ್ತೊಂದು ಟಯರ್ ಇಲ್ಲದ ಪರಿಣಾಮ ಬಸ್ ನಿಂತಲ್ಲೇ ನಿಲ್ಲುವಂತಾಯಿತು. ನಿರ್ವಾಹಕ ಹಾಗೂ ಚಾಲಕ ಅಸಹಾಯಕರಾದರು. ಈ ಮಾರ್ಗದಲ್ಲಿ ಈ ವೇಳೆ ಬಸ್ ಇಲ್ಲದ ಪರಿಣಾಮ ಜನರು ಬೈಕ್ ಹಾಗೂ ಆಟೋದ ಮೂಲಕ ತಮ್ಮ ಗ್ರಾಮಗಳಿಗೆ ತೆರಳಬೇಕಾಯಿತು. ಇದರಿಂದ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸಿದರು.
ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಹಳೆಯದಾಗಿದ್ದು, ಸುಸ್ಥಿತಿಯಲ್ಲಿಲ್ಲ. ಇದರಿಂದ ಆಗಾಗ್ಗೆ ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿವೆ. ಇದರಿಂದ ತುಂಬ ಸಮಸ್ಯೆಯಾಗಿದೆ. ಸುಸ್ಥಿತಿಯಲ್ಲಿರುವ ಬಸ್ ಬಿಡುವಂತೆ ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನ ಹರಿಸಿ ಈ ಮಾರ್ಗಕ್ಕೆ ಸುಸ್ಥಿತಿಯಲ್ಲಿರುವ ಬಸ್ ಬಿಡುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಭಾರತೀಯ ಕಿಸಾನ್ ಸಂಘದ ಗಾಜನೂರು ಗ್ರಾಮ ಘಟಕದ ಅಧ್ಯಕ್ಷ ನಾಗರಾಜು ಒತ್ತಾಯಿಸಿದ್ದಾರೆ.