ಪಂಪ್ಡ್ ಸ್ಟೋರೇಜ್ ಯೋಜನೆ ಜನಪರವಲ್ಲ

s protest
ಸಾಗರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ರಂಗಕರ್ಮಿ ಕೆ.ವಿ.ಅಕ್ಷರ ಸಹಿ ಮಾಡಿ ಬೆಂಬಲ ವ್ಯಕ್ತಪಡಿಸಿದರು. ದಿನೇಶ್ ಶಿರವಾಳ, ತೀ.ನ.ಶ್ರೀನಿವಾಸ್ ಇತರರಿದ್ದರು.
Published on

ಸಾಗರ: ಸರ್ಕಾರ ಕೈಗೆತ್ತಿಕೊಂಡಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಜನರಿಗೆ ಪೂರಕವಾದ ಯೋಜನೆಯಲ್ಲ. ಇದರಿಂದ ಯೋಜನೆ ಮಾಡುವವರಿಗೆ ಲಾಭವಾಗಬಹುದೇ ವಿನಃ ಜನರಿಗೆ ಬೇರ‌್ಯಾವುದೇ ಪ್ರಯೋಜನವೂ ಆಗುವುದಿಲ್ಲ ಎಂದು ಹೆಗ್ಗೋಡು ನೀನಾಸಂನ ರಂಗಕರ್ಮಿ ಕೆ.ವಿ.ಅಕ್ಷರ ಹೇಳಿದರು.

ಸಾಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಶಿವಮೊಗ್ಗ ಜಿಲ್ಲಾ ರೈತ ಸಂಘದಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಯೋಜನೆ ವಿರೋಧಿಸಿ ತಮ್ಮ ಸಹಿ ದಾಖಲಿಸಿ ಮಾತನಾಡಿದರು.

125 ರೂ. ಖರ್ಚು ಮಾಡಿ, 100 ರೂಪಾಯಿ ಗಳಿಸುವ ಅತ್ಯಂತ ಅವೈಜ್ಞಾನಿಕ ಯೋಜನೆ ಯಾವುದಾದರೂ ಇದ್ದರೆ ಅದು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ. ಇದು ತಾರ್ಕಿಕವೂ ಅಲ್ಲ, ವೈಜ್ಞಾನಿಕವೂ ಅಲ್ಲದ ಯೋಜನೆ. ಈಗಾಗಲೆ ಶರಾವತಿ ನದಿ ಕಣಿವೆ ಸಾಕಷ್ಟು ಆಕ್ರಮಣಕ್ಕೆ ಒಳಗಾಗಿದೆ. ಕಣಿವೆ ತನ್ನ ಧಾರಣಾ ಸಾಮರ್ಥ್ಯ ಕಳೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಮತ್ತೊಂದು ಗುಡ್ಡ ಬಗೆಯುವ ಯೋಜನೆ ಜಾರಿಗೆ ತರುತ್ತಿರುವುದನ್ನು ಎಲ್ಲರೂ ಖಂಡಿಸಬೇಕು ಎಂದರು.

ಈಗಾಗಲೇ ಶರಾವತಿ ನದಿಯಿಂದ ವಿದ್ಯುತ್ ಉತ್ಪಾದನೆ ಮಾಡಲು ಸುರಂಗ ಮಾರ್ಗಗಳು, ರಸ್ತೆಗಳನ್ನು ನಿರ್ಮಿಸಲಾಗಿದೆ. ಈಗ ಮತ್ತೆ ಸುರಂಗ ಕೊರೆಯುವುದರಿಂದ ಇದರ ದೀರ್ಘಕಾಲೀನ ಪರಿಣಾಮ ಮಲೆನಾಡಿನ ಪರಿಸರದ ಮೇಲಾಗುತ್ತದೆ. ಈಗಾಗಲೇ ಮಳೆ ಪ್ರಮಾಣ, ಕೃಷಿ ಚಟುವಟಿಕೆ ಅಸ್ತವ್ಯಸ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಲ್ಲದ, ಪರಿಸರಕ್ಕೆ ಮಾರಕವಾದ ಯೋಜನೆಯನ್ನು ಸರ್ಕಾರದ, ರಾಜಕಾರಣಿಗಳ ಆಸೆಗಾಗಿ ಜಾರಿಗೆ ತರಲಾಗುತ್ತಿದೆ ಎಂದು ದೂರಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಅಖಿಲೇಶ್ ಚಿಪ್ಪಳಿ, ಆನೆಗುಳಿ ಸುಬ್ರಾವ್, ಅಶೋಕ್ ಸೂರೆಮನೆ, ಮಂಜುನಾಥ್, ತೀ.ನ.ಶ್ರೀನಿವಾಸ್, ಪರಮೇಶ್ವರ ದೂಗೂರು, ಹಿತಕರ ಜೈನ್, ಸುಂದರ ಸಿಂಗ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net