ಪಂಪ್ಡ್ ಸ್ಟೋರೇಜ್ ಲಾಭದಾಯಕವಲ್ಲ

sgr protest (7)
ಸಾಗರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಹರತಾಳು ಹಾಲಪ್ಪ, ಸ್ವಾಮಿರಾವ್, ದಿನೇಶ್ ಶಿರವಾಳ, ಮಲ್ಲಿಕಾರ್ಜುನ ಹಕ್ರೆ, ಟಿ.ಡಿ.ಮೇಘರಾಜ್ ಇತರರಿದ್ದರು.
Published on

ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ಜಿಲ್ಲಾ ರೈತ ಸಂಘದಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಬುಧವಾರ ಕಲ್ಪಿತ ಶವಯಾತ್ರೆ ನಡೆಸಲಾಯಿತು.

ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮತನಾಡಿದ ಆನಂದಪುರ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಪಂಪ್ಡ್ ಸ್ಟೋರೇಜ್ ದುಬಾರಿ ಮತ್ತು ಸಾರ್ವಜನಿಕರಿಗೆ ಲಾಭದಾಯಕವಲ್ಲದ ಯೋಜನೆ. 2500 ಮೆ.ವಾ. ವಿದ್ಯುತ್ ವಿನಿಯೋಗಿಸಿ 2000 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಅತ್ಯಂತ ಅವೈಜ್ಞಾನಿಕ. ಇದರಿಂದ ದೊಡ್ಡ ಪ್ರಮಾಣದಲ್ಲಿ ಪರಿಸರ, ಜೀವವೈವಿಧ್ಯ ನಾಶವಾಗುತ್ತದೆ. ಈ ಹಿಂದೆ ಯೋಜನೆ ಕೈಗೆತ್ತಿಕೊಂಡಾಗಲೇ ಮಠಾಧೀಶರು ವಿರೋಧ ಮಾಡಿದ್ದೆವು. ಇದೀಗ ಮತ್ತೆ ಪ್ರಸ್ತಾಪವಾಗುತ್ತಿರುವುದು ದುರದೃಷ್ಟಕರ. ರಾಜ್ಯ ಸರ್ಕಾರ ಇಂತಹ ಪರಿಸರ ವಿರೋಧಿ ಯೋಜನೆ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ನಾನು ಶಾಸಕನಾಗಿದ್ದಾಗ ಯೋಜನೆ ಪ್ರಸ್ತಾಪವಾಗಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ದಟ್ಟ ಅರಣ್ಯ, ವನ್ಯಸಂಪತ್ತು ನಾಶವಾಗುವ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಳಿ ಯೋಜನೆ ಕೈಬಿಡುವಂತೆ ಮಾಡಿದ್ದೇನೆ. ಈಗಿನ ಜನಪ್ರತಿನಿಧಿಗಳು ವಿಧಾನಸೌಧದಲ್ಲಿ ಯೋಜನೆ ಪರ ಮಾತನಾಡಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಸುಮಾರು 4000 ಎಕರೆ ಅರಣ್ಯ ನಾಶವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ ಶಿರವಾಳ, ಪ್ರಮುಖರಾದ ಬಿ.ಸ್ವಾಮಿರಾವ್, ಅಖಿಲೇಶ್ ಚಿಪ್ಪಳಿ, ಚೂನಪ್ಪ ಪೂಜಾರಿ, ಶಿವಾನಂದ ಬೆಳಗಾವಿ, ತೇಜಸ್ವಿ ಪಟೇಲ್, ಶಶಿಕಾಂತ್ ಗುರೂಜಿ, ಶಿವಾನಂದ ಕುಗ್ವೆ, ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ, ಟಿ.ಡಿ.ಮೇಘರಾಜ್, ರತ್ನಾಕರ ಹೊನಗೋಡು, ಗಣೇಶ್‌ಪ್ರಸಾದ್, ಮಲ್ಲಿಕಾರ್ಜುನ ಹಕ್ರೆ, ಕೊಟ್ರಪ್ಪ ನೇದರವಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net