

ಲಾಹೋರ್: 2019ರಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ತಮ್ಮ ರಾಷ್ಟ್ರದ ಪಾತ್ರ ಇದ್ದದ್ದು ನಿಜ ಎಂದು ಪಾಕಿಸ್ತಾನದ ವಾಯುಪಡೆಯ ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹಮದ್ ಒಪ್ಪಿಕೊಂಡಿದ್ದಾರೆ. ಆ ಘಟನೆಯಲ್ಲಿ ಭಾರತದ ಅರೆಸೇನಾ ಪಡೆಯ 40 ಯೋಧರು ಹುತಾತ್ಮರಾಗಿದ್ದರು.
ಶುಕ್ರವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಏರ್ ವೈಸ್ ಮಾರ್ಷಲ್ ಔರಂಗಜೇಬ್ ಪುಲ್ವಾಮಾ ದಾಳಿಯನ್ನು ತಮ್ಮ ದೇಶದ ‘ಯುದ್ಧತಂತ್ರದ ಮೇಧಾವಿತನ’ ಎಂದು ಬಣ್ಣಿಸಿಕೊಂಡಿದ್ದಾರೆ. ಭಯೋತ್ಪಾದಕರ ಕೃತ್ಯಗಳ ಹಿಂದೆ ಪಾಕ್ ಕೈವಾಡ ಇರುತ್ತದೆ ಎಂಬ ಭಾರತದ ಆರೋಪಕ್ಕೆ ಈ ಹೇಳಿಕೆ ಪುಷ್ಟಿ ನೀಡುವಂತಿದೆ. ಪುಲ್ವಾಮಾ ದಾಳಿಯಲ್ಲಿ ತನ್ನ ಕೈವಾಡ ಇಲ್ಲವೆಂದು ಪಾಕಿಸ್ತಾನ ಇಷ್ಟು ವರ್ಷಗಳ ಕಾಲ ಹೇಳುತ್ತ ಬಂದಿತ್ತು.
‘ನಮ್ಮ ಯುದ್ಧತಂತ್ರದ ಜಾಣ್ಮೆ ಹೇಗಿರುತ್ತದೆ ಎಂಬುದನ್ನು ನಾವು ಅವರಿಗೆ (ಭಾರತಕ್ಕೆ) ಪುಲ್ವಾಮಾದಲ್ಲಿ ತೋರಿಸಿದ್ದೇವೆ’ ಎಂದು ಔರಂಗಜೇಬ್ ಹೇಳುವಾಗ, ಪಾಕಿಸ್ತಾನದ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಷನ್ನ ಮಹಾನಿರ್ದೇಶಕ ಮತ್ತು ಪಾಕ್ ನೌಕಾಪಡೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹಮದ್ ಷರೀಫ್ ಚೌಧರಿ ಪಕ್ಕದಲ್ಲೇ ಕುಳಿತಿದ್ದರು.
‘ಪಾಕಿಸ್ತಾನದ ಭೂಮಿ, ಜಲ, ವಾಯುಪ್ರದೇಶ ಹಾಗೂ ಜನರ ಮೇಲೆ ದಾಳಿ ನಡೆದರೆ ನಾವು ಪ್ರತೀಕಾರ ತೀರಿಸಿಕೊಳ್ಳದೇ ಇರಲು ಸಾಧ್ಯವೇ ಇಲ್ಲ. ನಮ್ಮ ರಕ್ಷಣಾ ಪಡೆಗಳ ಮೇಲೆ ಜನತೆಗೆ ವಿಶ್ವಾಸವೂ ಇದೆ, ಹೆಮ್ಮೆಯೂ ಇದೆ. ನಮ್ಮ ಯುದ್ಧ ಸಾಮರ್ಥ್ಯ ಏನೆಂಬುದನ್ನು ನಾವು ಪುಲ್ವಾಮಾದಲ್ಲಿ ತೋರಿಸಿದ್ದೇವೆ. ಈಗಿನ ಸಂದರ್ಭದಲ್ಲೂ ತೋರಿಸುತ್ತಿದ್ದೇವೆ’ ಎಂದು ಔರಂಗಜೇಬ್ ಹೇಳುವ ಮೂಲಕ ಭಯೋತ್ಪಾದಕರ ಹಿಂದೆ ತಮ್ಮ ದೇಶದ ಕೈವಾಡ ಇರುವುದನ್ನು ನೇರವಾಗಿಯೇ ಒಪ್ಪಿಕೊಂಡಿದ್ದಾರೆ.
ಪುಲ್ವಾಮಾ ದಾಳಿ ವಿವರ
ಭಾರತದ ಸಿಆರ್ಪಿಎಫ್ ಯೋಧರ ವಾಹನದ ಮೇಲೆ ಜೈಷ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಆತ್ಮಹತ್ಯಾ ಬಾಂಬರ್ ಆದಿಲ್ ಅಹ್ಮದ್ ದಾರ್ ದಾಳಿ ಮಾಡಿದ್ದ. ತಾನೇ ಈ ಕೃತ್ಯ ಎಸಗಿರುವುದಾಗಿ ಜೆಇಎಂ ಹೊಣೆ ಹೊತ್ತುಕೊಂಡಿತ್ತು. ಅದರ ಹೆಡ್ಕ್ವಾರ್ಟರ್ಸ್ ಇದ್ದದ್ದು ಪಾಕಿಸ್ತಾನದ ಬಹಾವಲ್ಪುರದಲ್ಲಿ. ಪಾಕ್ನ ಆಗಿನ ಪ್ರಧಾನಿ ಇಮ್ರಾನ್ಖಾನ್ ಇದರಲ್ಲಿ ತಮ್ಮ ಸೇನೆಯ ಪಾತ್ರ ಇಲ್ಲವೆಂದು ವಾದಿಸಿದ್ದರು. ಬಾಂಬರ್ಗೆ ಪಾಕ್ ಜತೆಗಿದ್ದ ನಂಟನ್ನು ಭಾರತ ದಾಖಲೆ ಸಮೇತ ಸಾಬೀತುಪಡಿಸಿದರೂ ಪಾಕಿಸ್ತಾನದ ನಾಯಕರು ತಮ್ಮ ಮೊಂಡುವಾದ ಬಿಟ್ಟಿರಲಿಲ್ಲ. ಹಾಗಾಗಿ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಾಕೋಟ್ನ ಜೆಇಎಂ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು. ಪಾಕ್ ಸರ್ಕಾರ ಯಾವುದನ್ನು ಈವರೆಗೆ ಅಲ್ಲಗಳೆಯುತ್ತ ಬಂದಿತ್ತೋ ಅದನ್ನು ಈಗ ಔರಂಗಜೇಬ್ ಒಪ್ಪಿಕೊಂಡಿರುವುದು ಗಮನಾರ್ಹ.
ಯಾರು ಈ ಚೌಧರಿ?
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಲೆ.ಜ. ಚೌಧರಿ ಇತಿಹಾಸವೂ ಉಗ್ರರ ಜೊತೆ ಬೆರೆತಿದೆ. ಈತ ಅಣು ವಿಜ್ಞಾನಿ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಎಂಬವರ ಮಗ. ಆ ವಿಜ್ಞಾನಿ ಅಲ್ಖೈದಾ ಜತೆ ನಂಟು ಹೊಂದಿದ್ದರು. ಆ ಉಗ್ರಗಾಮಿ ಸಂಘಟನೆಗೆ ಅಣ್ವಸ್ತ್ರ ತಂತ್ರಜ್ಞಾನವನ್ನು ವರ್ಗಾವಣೆ ಮಾಡಿದ ಆರೋಪ ಅವರ ಮೇಲಿತ್ತು. ಈ ಹಿನ್ನೆಲೆಯಲ್ಲಿಯೇ ಅವರನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್ಖೈದಾ ನಿರ್ಬಂಧ ಸಮಿತಿಯು ಕುಖ್ಯಾತರ ಪಟ್ಟಿಗೆ ಸೇರಿಸಿತ್ತು.