ಪುಲ್ವಾಮಾ ದಾಳಿಯಲ್ಲಿ ಉಗ್ರರಿಗೆ ನೆರವಾಗಿದ್ದ ಮಹಿಳೆ: ಫಾರೂಕ್ ಖಾತೆಗೆ 10 ಲಕ್ಷ ರೂ. ಜಮಾ ಎಂದ ಎನ್​ಐಎ

Terror Woman
Published on

ನವದೆಹಲಿ: ಪುಲ್ವಾಮಾ ದಾಳಿ ಪ್ರಕರಣದಲ್ಲಿ ಬಂಧಿಸಲಾಗಿರುವ ಏಕೈಕ ಮಹಿಳೆ ಇನ್ಶಾ ಜಾನ್ (23), ಜೈಷ್-ಎ- ಮೊಹಮದ್ ಭಯೋತ್ಪಾದಕರಿಗೆ ನೆರವಾಗಿದ್ದಳು ಎಂದು ಎನ್​ಐಎ ಕೋರ್ಟ್​ಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿದೆ.

ದಾಳಿಯ ಪ್ರಧಾನ ಸಂಚುಕೋರ ಮಹಮದ್ ಉಮರ್ ಫಾರೂಕ್ ಜತೆ ಆಕೆ ಫೋನ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಹೊಂದಿದ್ದಳು. ಇವರಿಬ್ಬರ ಮಧ್ಯೆ ನಡೆದ ಸಂಭಾಷಣೆಗಳ ಧ್ವನಿಮುದ್ರಿಕೆಯನ್ನು ಆಲಿಸಲಾಗಿದೆ ಎಂದು ಎನ್​ಐಎ ತಿಳಿಸಿದೆ.

ದಾಳಿಯ ಪ್ರಮುಖ ಆರೋಪಿಯಾಗಿದ್ದ ಮಹಮದ್ ಉಮರ್ ಫಾರೂಕ್​ನ ಪಾಕಿಸ್ತಾನದ ಮೂರು ಬ್ಯಾಂಕ್ ಖಾತೆಗಳಿಗೆ 10 ಲಕ್ಷ ರೂಪಾಯಿ (ಪಾಕಿಸ್ತಾನಿ ಕರೆನ್ಸಿ) ಜಮಾ ಆಗಿತ್ತು. ಈ ಹಣ ದಾಳಿಗೂ ಮುಂಚೆಯೇ ಸಂದಾಯವಾಗಿತ್ತು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಜೈಷ್-ಎ-ಮೊಹಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸೇರಿ 19 ಜನರ ವಿರುದ್ಧ ಎನ್​ಐಎ ಆರೋಪಪಟ್ಟಿ ಸಲ್ಲಿಸಿದೆ. ಮಸೂದ್ ಅಜರ್​ನ ಸೋದರ ಸಂಬಂಧಿಯಾದ ಫಾರೂಕ್, 2019ರ ಮಾರ್ಚ್​ನಲ್ಲಿ ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟ.

ಸ್ಪೋಟಕ, ಕಾರ್​ಗೆ ವೆಚ್ಚ

ಸ್ಪೋಟಕ ಹಾಗೂ ಕಾರು ಖರೀದಿಗೆ ಭಯೋತ್ಪಾದಕರು ಆರು ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು. ಆ ಮಾರುತಿ ಕಾರನ್ನು ಆತ್ಮಾಹುತಿ ದಾಳಿಗೆ ಬಳಸಿದ್ದರು. 200 ಕೆ.ಜಿ. ಅಮೋನಿಯಂ ನೈಟ್ರೇಟ್ ಸಹಿತ ಸ್ಪೋಟಕ ಖರೀದಿಸಲೆಂದೇ 2.80 ಲಕ್ಷ ರೂಪಾಯಿ ವ್ಯಯಿಸಿದ್ದರು ಎಂಬ ಅಂಶ ಆರೋಪಪಟ್ಟಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net