ತಂಗಳನ್ನ, ಕೊಲೆ ಬೆದರಿಕೆ! ಇನ್ನೂ ಖಾಕಿ ಕಣ್ಣಿಗೆ ಬೀಳದ ಪೂಜಾ ಖೇಡ್ಕರ್ ಪೋಷಕರು; ಲಾರಿ ಚಾಲಕ ಅಳಲು | Puja Khedkar

ವಿಜಯವಾಣಿ (7)
Published on

Puja Khedkar: ವಂಚನೆ, ಒಬಿಸಿ ಮತ್ತು ಅಂಗವಿಕಲ ಕೋಟಾದ ಪ್ರಯೋಜನಗಳನ್ನು ತಪ್ಪಾಗಿ ಪಡೆದ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಐಎಎಸ್ ಟ್ರೈನಿ ಪೂಜಾ ಖೇಡ್ಕರ್ (Puja Khedkar) ತಂದೆ ಮತ್ತು ತಾಯಿ ಇದೀಗ ಖಾಕಿ ಕಣ್ಣಿನಿಂದ ತಪ್ಪಿಸಿಕೊಂಡಿದ್ದು, ಇವರಿಬ್ಬರ ಬಂಧನಕ್ಕಾಗಿ ಸದ್ಯ ಪೊಲೀಸರು ಮುಂದಾಗಿದ್ದಾರೆ.

ಬಾಡಿಗಾರ್ಡ್​ ಆರೆಸ್ಟ್​

ವಜಾಗೊಂಡಿರುವ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಂದೆ ದಿಲೀಪ್ ಖೇಡ್ಕರ್ ಮತ್ತು ಅವರ ಬಾಡಿಗಾರ್ಡ್​, ಸೆ.13ರಂದು ಪುಣೆಯ ರಸ್ತೆಯಲ್ಲಿ ತಮ್ಮ ಐಷಾರಾಮಿ ಕಾರಿಗೆ ಗುದ್ದಿದ ಲಾರಿ ಚಾಲಕನಿಗೆ 2 ಕೋಟಿ ರೂ. ಕೊಡು, ಇಲ್ಲವೇ ಸರಿಪಡಿಸಿಕೊಡು ಎಂದು ಹೆದರಿಸಿದ್ದರು. ಇದರೊಂದಿಗೆ ಅಲ್ಲಿಂದ ಆತನನ್ನು ಕಿಡ್ನ್ಯಾಪ್​ ಮಾಡಿದ ದಿಲೀಪ್​, ತಮ್ಮ ಪುಣೆ ನಿವಾಸದಲ್ಲಿ ಚಾಲಕನನ್ನು ಬಚ್ಚಿಟ್ಟಿದ್ದರು. ಈ ವಿಷಯ ಖಾಕಿಗೆ ಲಭಿಸಿದ್ದೇ ತಡ, ದಿಲೀಪ್​ ನಿವಾಸಕ್ಕೆ ಖಾಕಿ ಪಡೆ ಎಂಟ್ರಿಕೊಟ್ಟು, ಸೆರೆಯಾಗಿದ್ದ ಲಾರಿ ಚಾಲಕ ಕುಮಾರ್​ನನ್ನು ರಕ್ಷಿಸಿತು.

ಹಳಸಿದ ಊಟ

ಈ ವೇಳೆ ಖೇಡ್ಕರ್ ದಂಪತಿಯನ್ನು ವಿಚಾರಣೆಗೆ ಕರೆದ ಪೊಲೀಸರಿಗೆ ನಾವು ನೇರವಾಗಿ ಠಾಣೆಗೆ ಬರುತ್ತೇವೆ ಎಂದು ಹೇಳಿದ ದಂಪತಿ, ವಿಚಾರಣಾ ನೋಟಿಸ್​ ಬಳಿಕವೂ ವಿಚಾರಣೆಗೆ ಹಾಜರಾಗಲಿಲ್ಲ. ಅಂದಿನಿಂದ ಇಂದಿನವರೆಗೆ ಎಲ್ಲಿಯೂ ಕಾಣಿಸಿಕೊಳ್ಳದ ಜೋಡಿ, ಎಲ್ಲಿದ್ದಾರೆ? ಎಲ್ಲಿ ಅವಿತಿದ್ದಾರೆ? ಎಂಬ ಸುಳಿವು ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಈ ಮಧ್ಯೆ, ಅವರ ಬಾಡಿಗಾರ್ಡ್​ ಅರೆಸ್ಟ್​ ಆಗಿದ್ದು, ಸದ್ಯ ಕಿಲಾಡಿ ದಂಪತಿಗಳಿಗೆ ಶೋಧ ಕಾರ್ಯ ಮುಂದುವರೆದಿದೆ. ಇದೇ ಸಮಯದಲ್ಲಿ ಅಳಲು ತೋಡಿಕೊಂಡಿರುವ ಲಾರಿ ಚಾಲಕ, ಖೇಡ್ಕರ್ ದಂಪತಿ ತನಗೆ ಹಳಸಿದ ಊಟ ಹಾಕ್ತಿದ್ದರು ಎಂದು ಹೇಳಿಕೊಂಡಿದ್ದಾನೆ.

ಲಾರಿ ಚಾಲಕ ಪ್ರಲ್ಹಾದ್​ ಚೌಹಣ್​, ದಿಲೀಪ್ ಖೇಡ್ಕರ್​ ಮತ್ತು ಅವರ ಬಾಡಿಗಾರ್ಡ್​ ನನ್ನನ್ನು ರಸ್ತೆಯಿಂದ ಕಿಡ್ನ್ಯಾಪ್ ಮಾಡಿಕೊಂಡು ತಮ್ಮ ಮನೆಗೆ ಕರೆದೊಯ್ದರು. ನನ್ನ ಫೋನ್ ಕಸಿದ ಅವರು, ಒಬ್ಬರನ್ನು ನನ್ನೊಂದಿಗೆ ನೋಡಿಕೊಳ್ಳಲು ಬಿಟ್ಟು ಹೋದರು. ನಮ್ಮ ಲಾರಿ ಮಾಲೀಕರು ಏನಾದರೂ ಆ 2 ಕೋಟಿ ರೂ. ಕೊಡಲಿಲ್ಲ ಎಂದರೆ ನನ್ನನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದರು. ತಿನ್ನಲು ಹಳಸಿದ ಊಟ ಕೊಡುತ್ತಿದ್ದರು ಎಂದು ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾನೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 137(2) (ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 127(7) (ಸುಲಿಗೆಗಾಗಿ ಅಕ್ರಮ ಬಂಧನ) ಮತ್ತು 308(4) (ಸುಲಿಗೆ) ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುಣೆ ಪೊಲೀಸರು ದಿಲೀಪ್ ಪತ್ನಿ ಮನೋರಮಾ ಖೇಡ್ಕರ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿದ್ದು, ನೋಟಿಸ್ ಜಾರಿಗೊಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net