ಸ್ವಚ್ಛತಾಕರ್ಮಿಗಳಿಗೆ ಭರ್ಜರಿ ಪಾರ್ಟಿ ನೀಡಿದ ಶಾಸಕ! ಗತ್ತು ಗಮ್ಮತ್ತು ಹೀಗಿತ್ತು…

puducherry dmk mla sampath
Published on

ಪುದುಚೇರಿ: ಹುಟ್ಟುಹಬ್ಬವನ್ನು ಕೆಲವರು ಸ್ಟಾರ್​​ ಹೋಟೆಲ್​ಗಳಲ್ಲಿ ಹಾಗೂ ಅನಾಥಾಶ್ರಮಗಳಲ್ಲಿ ಆಚರಿಸುತ್ತಾರೆ. ಆದರೆ ಪುದುಚೇರಿ ಮುದಲಿಯಾರ್‌ಪೇಟ್ ಕ್ಷೇತ್ರದ ಡಿಎಂಕೆ ಶಾಸಕ. ಸಂಪತ್ ಅವರು ತಮ್ಮ ಹುಟ್ಟುಹಬ್ಬದಂದು ಸ್ಟಾರ್ ಹೋಟೆಲ್‌ನಲ್ಲಿ ಸ್ವಚ್ಛತಾ ಕಾರ್ಯಕರ್ತರಿಗೆ ಭರ್ಜರಿ ಪಾರ್ಟಿ ನೀಡಿದ್ದಾರೆ.

ಸಂಪತ್ ಅವರು ಪುದುಚೇರಿಯ ಮುದಲಿಯಾರ್‌ಪೇಟ್ ಕ್ಷೇತ್ರದ ಡಿಎಂಕೆ ಶಾಸಕರಾಗಿದ್ದಾರೆ. ಮೊನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕ ಸಂಪತ್, ತಮ್ಮ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರಿಗೆ ಸ್ಪೆಷಲ್ ಪಾರ್ಟಿಯನ್ನು ಸ್ಟಾರ್ ಹೋಟೆಲ್‌ನಲ್ಲಿ ಆಯೋಜಿಸಿದ್ದರು. ಈ ಪಾರ್ಟಿಯು ಬಫೆ ಶೈಲಿಯಲ್ಲಿ ಆಯೋಜಿಸಲಾಗಿತ್ತು. ನೀವು ಎಷ್ಟು ಬೇಕಾದರೂ ಯಾವ ಪದಾರ್ಥವನ್ನಾದರು ಸೇವಿಸಬಹುದಾಗಿತ್ತು. ಪಾರ್ಟಿ ಮಾತ್ರವಲ್ಲದೆ ಸ್ವಚ್ಛತಾ ಮಹಿಳಾ ಕಾರ್ಯಕರ್ತರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಸೀರೆಯನ್ನು ನೀಡಿದ್ದಾರೆ.

ಮೆನುವಿನಲ್ಲಿ ಬಿರಿಯಾನಿ, ಪನೀರ್ ಬಟರ್ ಮಸಾಲಾ, ಇತ್ಯಾದಿ ಸೇರಿದಂತೆ ವಿವಿಧ ರೀತಿಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ನೀಡಲಾಗಿತ್ತು. ಸಂಪತ್ ಅವರು ತಮ್ಮ ಕೈಯಾರೆ ಎಲ್ಲರಿಗೂ ಊಟ ಬಡಿಸಿ ಜತೆಗೆ ಕುಳಿತು ಊಟ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುವುದರ ಜತೆ ಸಂಪತ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net