

ಶಿವಮೊಗ್ಗ: ತೀರ್ಥಹಳ್ಳಿ ತುಂಗಾ ವಿದ್ಯಾವರ್ಧಕ ಸಂಘದ ತುಂಗಾ ಮಹಾವಿದ್ಯಾಲಯದ ವಜ್ರಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಡಾ. ಬಿ.ಗಣಪತಿ ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಲಿತಾಂಶದಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ಪಿಯುಸಿಯಲ್ಲಿ ಉಚಿತ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತರಿಗೆ ಅನುಕೂಲವಾಗಲಿ ಎಂಬ ಆಶಯ ನಮ್ಮದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
1967ರಲ್ಲಿ ಆರಂಭವಾದ ಸಂಸ್ಥೆ ತುಂಗಾ ಮಹಾವಿದ್ಯಾಲಯ, ತುಂಗಾ ವಿದ್ಯಾವರ್ಧಕ ಸಂಘದ ಮೂಲಕ ಪದವಿ, ಪದವಿಪೂರ್ವ, ಹಾಗೂ ಎಂ.ಕಾಂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ನಡೆಸುತ್ತಿದೆ. ಡಾ. ಬಿ.ಎನ್.ರಂಗಪ್ಪ, ಕಾಸರವಳ್ಳಿ ರಾಮಕೃಷ್ಣ ರಾಯರು, ಕಲ್ಲಹಳ್ಳ ರಾಮ ಭಟ್ ಮುಂತಾದ ಶಿಕ್ಷಣ ಪ್ರೇಮಿಗಳ ಅವಿರತ ಶ್ರಮದ ಫಲವಾಗಿ ತುಂಗಾ ಮಹಾವಿದ್ಯಾಲಯ ವಜ್ರ ಮಹೋತ್ಸವದ ಹೊಸ್ತಿಲಲ್ಲಿ ನಿಂತಿದೆ ಎಂದರು.
ತುಂಗಾ ವಿದ್ಯಾವರ್ಧಕ ಸಂಘ ಶಿಕ್ಷಣವನ್ನು ಸೇವೆಯಂದೇ ಪರಿಗಣಿಸಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಉಚಿತ ಪಿಯು ಶಿಕ್ಷಣದ ಕೊಡುಗೆ ನೀಡುತ್ತಿದೆ. ಇದುವರೆಗೆ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದವರ ಪೈಕಿ ಹಲವರು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಮೊದಲ ರ‌್ಯಾಂಕ್ ಸೇರಿ ಒಟ್ಟು 56 ರ‌್ಯಾಂಕ್‌ಗಳನ್ನು ಗಳಿಸಿ ಕುವೆಂಪು ವಿವಿ ಮಟ್ಟದಲ್ಲೇ ಅತ್ಯುತ್ತಮ ಕಾಲೇಜು ಎಂದು ಹೆಸರುಗಳಿಸಿದೆ. ಸಿಇಟಿಯಲ್ಲಿ 6ನೇ ರ‌್ಯಾಂಕ್ ಗಳಿಸಿರುವುದು ಕಾಲೇಜಿನ ಹೆಮ್ಮೆ ಎಂದು ಹೇಳಿದರು.
ತುಂಗಾ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಎಂ.ಎನ್.ರಮೇಶ್, ಕನ್ನಂಗಿ ಶೇಷಾದ್ರಿ, ಪ್ರಾಚಾರ್ಯ ಡಾ. ಆರ್.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.