

ಬೆಂಗಳೂರು: ಬಡ್ಡಿ, ಸಟ್ಟಾ (ಷೇರು, ಸೆಕ್ಯುರಿಟಿ ವಗೈರೆ) ವ್ಯವಹಾರಕ್ಕೆ ಆಸ್ಪದವಿಲ್ಲ. ಪ್ರತಿ ವರ್ಷ ಕುಟುಂಬ ಸದಸ್ಯರ ಸಹಿತ ಚರ-ಸ್ಥಿರಾಸ್ತಿ ವಿವರ ಸಲ್ಲಿಕೆ. ಕರ್ತವ್ಯಕ್ಕೆ ಗೈರಾಗಿ ಮುಷ್ಕರ ಹೂಡುವಂತಿಲ್ಲ. ಇವು, ಸರ್ಕಾರಿ ಸಿಬ್ಬಂದಿಗೆ ಅಳವಡಿಸಲು ಉದ್ದೇಶಿತ ನಡತೆ ಚೌಕಟ್ಟಿನ ಪ್ರಮುಖಾಂಶಗಳು.
ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಕಾರ್ಯಕ್ಷಮತೆ ಹೆಚ್ಚಳ, ಜನಸ್ನೇಹಿ ಕರ್ತವ್ಯ ನಿರ್ವಹಣೆ, ಪಾರದರ್ಶಕತೆ ಇತ್ಯಾದಿ ಕ್ರಮಗಳಿಗೆ ಅನುವು ಮಾಡಿಕೊಡಲೆಂದು ನಿಯಮಾವಳಿಗಳ ಕರಡು ಪ್ರಕಟಿಸಲಾಗಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2020ರ ಕರಡನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಮಂಗಳವಾರ ಅಧಿಸೂಚನೆ ಹೊರಡಿಸಲಾಗಿದೆ. ಹಾಗೆಯೇ ಇಲಾಖೆ ಕಾರ್ಯದರ್ಶಿಗೆ ಸಲಹೆ ಮತ್ತು ಆಕ್ಷೇಪಣೆಗಳನ್ನು 15 ದಿನಗಳೊಳಗೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಕರಡಿಗೆ ಸಂಬಂಧಿಸಿದಂತೆ ಸಲಹೆ ಇಲ್ಲವೇ ಆಕ್ಷೇಪಣೆಗಳು ಸ್ವೀಕಾರ ಯೋಗ್ಯವಾದವುಗಳನ್ನು ಸರ್ಕಾರ ಪರಿಗಣಿಸಲಿದ್ದು, ನಿಗದಿತ ಗಡುವು ಮುಗಿದ ಬಳಿಕ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದ ಸೇವಾ ನಿಯಮಗಳು ಜಾರಿಗೆ ಬರಲಿವೆ.
ನಿಯಮಿಸಿದ ಪ್ರಾಧಿಕಾರಿ: ಪೂರ್ವಾನುಮತಿ ನೀಡಲು, ವರದಿ ಪಡೆಯಲು ಇತ್ಯಾದಿ ನಿಯಮಾನುಸಾರ ಕ್ರಮಗಳಿಗೆ ಪ್ರಾಧಿಕಾರಿಯನ್ನು ನೇಮಿಸಲಾಗುತ್ತದೆ. ನ್ಯಾಯಿಕ ಸೇವೆಗೆ ಸಂಬಂಧಿಸಿದ ವ್ಯಕ್ತಿಗೆ ಹೈಕೋರ್ಟ್ ನಿಯಮಿಸಿದ ಪ್ರಾಧಿಕಾರಿಯಾಗುತ್ತದೆ.
ಗ್ರೂಪ್ ಎ, ಗ್ರೂಪ್ ಬಿ ಯಲ್ಲಿ ತಹಸೀಲ್ದಾರ್ ದರ್ಜೆ-2 ಹೊಂದಿರುವ ಸಿಬ್ಬಂದಿಗೆ ಸರ್ಕಾರವೇ ನಿಯಮಿಸಿದ ಪ್ರಾಧಿಕಾರವಾಗಲಿದ್ದರೆ, ಗ್ರೂಪ್-ಬಿ, ಸಿ ಮತ್ತು ಡಿ ದರ್ಜೆಯ ನೌಕರರಿಗೆ ಆಯಾ ಇಲಾಖೆ ಮುಖ್ಯಸ್ಥರು ನಿಯಮಿಸಿದ ಪ್ರಾಧಿಕಾರಿಯಾಗಲಿದ್ದಾರೆ.