ಕ್ಷುಲ್ಲಕ ನೆಪ ನೀಡಿ ಜನೋಪಯೋಗಿ ಕಾರ್ಯಕ್ರಮ ನಿಷೇಧಿಸಲಾಗದು: ಹೈಕೋರ್ಟ್

highcourt
Published on

ಬೆಂಗಳೂರು:  ಕ್ಷುಲ್ಲಕ ನೆಪ ನೀಡಿ ಜನೋಪಯೋಗಿ ಕಾರ್ಯಕ್ರಮವನ್ನು ನಿಷೇಧಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿದಂತೆ ಎಂದು ಹೈಕೋರ್ಟ್ ನುಡಿದಿದೆ.

500 ಮೀಟರ್ ಅಂತರದಲ್ಲಿ ಎರಡು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ತೆರೆಯಲು ಅನುಮತಿಸಬಾರದು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಈ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲೆಯ ಶೀಲಾ ಭಟ್ ಎಂಬುವರಿಗೆ ಜನೌಷಧಿ ಕೇಂದ್ರ ತೆರಯಲು ಅನುಮತಿಸಿರುವುದನ್ನು ಪ್ರಶ್ನಿಸಿ ಅದೇ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಸವಿನಯ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

ಪ್ರತಿವಾದಿಯಾಗಿರುವ ಶೀಲಾ ಭಟ್ ಅವರಿಗೆ ಜನೌಷಧ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಸವಿನಯ ಅವರಿಗೆ ಜನೌಷಧಿ ಕೇಂದ್ರ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ಮಾತ್ರ ಮಂಜೂರು ಮಾಡಲಾಗಿದೆ. ಹೀಗಿರುವಾಗ, ತನಗೆ ಮಂಜೂರಾಗಿರುವ ಕೇಂದ್ರಕ್ಕೂ ಶೀಲಾ ಭಟ್‌ಗೆ ಅನುಮತಿ ನೀಡಿರುವ ಕೇಂದ್ರದ ನಡುವಿನ ಅಂತರ ಒಂದು ಕಿಲೋ ಮೀಟರ್ ಮಾತ್ರ ಇದೆ ಎಂದು ಇಲ್ಲಿ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಲು ಯಾವುದೇ ಹಕ್ಕು ಹೊಂದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಒಟ್ಟಾರೆಯಾಗಿ ಈ ಅರ್ಜಿಯೂ ಕಾನೂನಿನ ಭದ್ರ ಬುನಾದಿ ಹೊಂದಿರದ ಮರಳಿನ ಗೋಪುರದ ಮೇಲೆ ರೂಪುಗೊಂಡಿದೆ. ಶೀಲಾ ಭಟ್‌ಗೆ ಜನೌಷಧಿ ಕೇಂದ್ರ ತೆರೆಯಲು ಅನುಮತಿಸಿರುವುದರಲ್ಲಿ ಯಾವುದೇ ತರನಾದ ತಪ್ಪಿಲ್ಲ. ಅತ್ಯಂತ ಕಡಿಮೆ ಅಂತರದಲ್ಲಿ ಮತ್ತೊಂದು ಜನೌಷಧಿ ಕೇಂದ್ರ ತೆರೆಯಲು ಅನುಮತಿಸಿದರೆ ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂದು ಅರ್ಜಿಯುದ್ದಕ್ಕೂ ಹೇಳಿದ್ದಾರೆ. ಆದರೆ, ವಾಸ್ತವಿಕ ಚಿತ್ರಣ ಬೇರೆ ಇದೆ. ಹಲವರಿಗಾಗಿ ರೂಪಿಸಿರುವ ಕಲ್ಯಾಣ ಕಾರ್ಯಕ್ರಮದ ಭಾವನೆಯನ್ನು ನ್ಯಾಯಾಲಯ ರಕ್ಷಿಸಬೇಕೆ ವಿನಃ ಕೆಲವರ ಭಾವನೆಯಲ್ಲ.

ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂಬ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದು ನ್ಯಾಯಪೀಠ ಹೇಳಿದೆ.ಎರಡು ಕೇಂದ್ರಗಳ ನಡುವಿನ ಭೌಗೋಳಿಕ ಪ್ರದೇಶದ ಅಂತರ ಕಡಿಮೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದರೆ, ಹಾಗೇನಿಲ್ಲ. ಅಂತೆಯೇ, ಅರ್ಜಿದಾರರ ಅರ್ಜಿಯು ಅರ್ಜಿಯಾಗಿಯೇ ಉಳಿದಿದೆ. ಈ ನೆಲೆಯಲ್ಲಿ ಅರ್ಜಿಯು ಅನೂರ್ಜಿತವಾಗಿದ್ದು, ಅಕ್ರಮ, ಪ್ರಕ್ರಿಯೆಯಲ್ಲಿ ಲೋಪ ಅಥವಾ ಸ್ವೇಚ್ಛೆ ಕಾಣಲಾಗದು. ಕ್ಷುಲ್ಲಕ ಕಾರಣಗಳ ಆಧಾರದಲ್ಲಿ ಕಾನೂನುಬದ್ಧವಾದ, ಜನೋಪಯೋಗಿ ಯೋಜನೆಯನ್ನು ನಿಷೇಧಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಮಾಡಿದಂತಾಗುತ್ತದೆ ಎಂದು ಪೀಠ ಉಲ್ಲೇಖಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net