

ಕಡೂರು: ಜನಸ್ಪಂದನಾ ಸಭೆಯಲ್ಲಿ ಬಿಟ್ಟೇನಹಳ್ಳಿ ಗ್ರಾಮದ ರೈತ ಬಿ.ಬಿ.ವಿಜಯಕುಮಾರ್ ಅವರು ಹೆಣ್ಣು ಕೊಡಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದ ಪ್ರಸಂಗ ನಡೆಯಿತು. ನನಗೆ 33 ವರ್ಷವಾಗಿದ್ದು ಹೆಣ್ಣು ಸಿಗದೆ ಮದುವೆಯಾಗಿಲ್ಲ. ರೈತರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಯಾವ ಜಾತಿಯ ಹೆಣ್ಣಾದರೂ ಪರವಾಗಿಲ್ಲ, ಮದುವೆಯಾಗಲು ಸಿದ್ಧನಿದ್ದೇನೆ. ದಯಮಾಡಿ ಹೆಣ್ಣು ಕೊಡಿಸಿ ಎಂದು ಶಾಸಕ ಆನಂದ್ ಅವರ ಬಳಿ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಆನಂದ್, ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಸಿಡಿಪಿಒ ಶಿವಪ್ರಕಾಶ್ ಅವರಿಗೆ ನಿರ್ದೇಶಿಸಿದರು. ರಾಜ್ಯದಲ್ಲಿ ಒಟ್ಟು 6 ಮಹಿಳಾ ನಿಲಯಗಳಿದ್ದು ಅಲ್ಲಿ ಅನಾಥ ಹೆಣ್ಣು ಮಕ್ಕಳನ್ನು ಸರ್ಕಾರದಿಂದ ಪೋಷಿಸಲಾಗುತ್ತದೆ. ಅಲ್ಲಿಗೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಹುಡುಗನ ಹಿನ್ನೆಲೆ ಪರಿಶೀಲನೆ ಮಾಡುತ್ತಾರೆ. ಉತ್ತಮ ಎನಿಸಿದರೆ ಹೆಣ್ಣು ಕೊಡುತ್ತಾರೆ. ಮದುವೆಯಾಗದ ಯುವಕರು ಪ್ರಯತ್ನಿಸಬಹುದು ಎಂದು ಸಿಡಿಪಿಒ ತಿಳಿಸಿದರು.