ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಬ್ರಿಟನ್, ಜರ್ಮನಿ, ಫ್ರಾನ್ಸ್, ನೆದರ್ಲ್ಯಾಂಡ್, ಇಟಲಿ, ಸ್ಪೇನ್ ಮತ್ತು ಸ್ವೀಡನ್ ಸೇರಿದಂತೆ ಪ್ರಮುಖ ಯುರೋಪಿಯನ್ ರಾಷ್ಟ್ರಗಳಲ್ಲಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ಬ್ರಿಟನ್ನಲ್ಲಿ ಲಂಡನ್ನ ಪ್ರಮುಖ ಹೆದ್ದಾರಿಗಳು, ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆಗಳು ನಡೆದಿವೆ. ಅತಿಯಾದ ಗಣಿಗಾರಿಕೆ ಪರಿಸರಕ್ಕೆ ಹಾನಿಮಾಡುತ್ತಿದೆ, ಇದನ್ನು ತಡೆಯಬೇಕು ಎಂದು ಆಗ್ರಹಿಸಿ ಜರ್ಮನಿಯ ಬರ್ಲಿನ್, ಮ್ಯೂನಿಚ್, ಫ್ರಾಂಕ್ಫರ್ಟ್ನಲ್ಲಿ ಜನರು ಬೀದಿಗಿಳಿದಿದ್ದಾರೆ. ನೆದರ್ಲ್ಯಾಂಡ್ನ ಹೇಗ್ ಮತ್ತು ಆಮ್ಸ್ಟರ್ಡ್ಯಾಮ್ನ ಶಿಫೋಲ್ನಲ್ಲಿ ಜನಾಕ್ರೋಶ ತೀವ್ರಗೊಂಡಿದ್ದು, ಪಳೆಯುಳಿಕೆ ಇಂಧನಗಳಿಗೆ ನೀಡುವ ಸರ್ಕಾರಿ ಸಬ್ಸಿಡಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ. ಫ್ರಾನ್ಸ್, ಇಟಲಿ, ಸ್ವೀಡನ್ನಲ್ಲಿ ಕೂಡ ಹೆಚ್ಚುತ್ತಿರುವ ತಾಪಮಾನ ತಡೆಯಲು ಸರ್ಕಾರ ಸೂಕ್ತ ನೀತಿಗಳನ್ನು ಜಾರಿಗೆ ತರಬೇಕು ಎಂಬ ಜನಾಗ್ರಹ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆಗಳ ಫಲವಾಗಿ ಯುರೋಪಿಯನ್ ಯೂನಿಯನ್ ತನ್ನ "ಗ್ರೀನ್ ಡೀಲ್' (Green Deal) ಅಡಿಯಲ್ಲಿ ಕಠಿಣ ಗುರಿಗಳನ್ನು ನಿಗದಿಪಡಿಸಿದೆ. 2035ರ ವೇಳೆಗೆ ಪೆಟ್ರೋಲ್/ಡೀಸೆಲ್ ಕಾರುಗಳ ಮಾರಾಟ ನಿಷೇಧ, ನವೀಕರಿಸಬಹುದಾದ ಇಂಧನ ಬಳಕೆಯ ಪ್ರಯತ್ನಗಳಿಗೆ ವೇಗ ಸಿಕ್ಕಿದೆ.