

ನವದೆಹಲಿ: ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದಿರುವ ಕುತಂತ್ರಿ ಚೀನಾಗೆ ಭಾರತ ಸರ್ಕಾರ ಪಬ್ಜಿ ಸೇರಿದಂತೆ 118 ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡಿ ಶಾಕ್ ನೀಡಿದೆ. ಇದರ ಬೆನ್ನಲ್ಲೇ ಭಾರತೀಯ ಟ್ವಿಟರ್ ಬಳಕೆದಾರರು ಅನೇಕ ಹಾಸ್ಯಾಸ್ಪದ ಮೀಮ್ಸ್ಗಳ ಮೂಲಕ ಸರ್ಕಾರದ ಆದೇಶದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಪಬ್ಜಿ ಬ್ಯಾನ್ ಮಾಡಿದ್ದರಿಂದ ದೇಶದಲ್ಲಿ ಪಬ್ಜಿ ಗೇಮ್ಗೆ ದಾಸರಾಗಿದ್ದವರು ಮತ್ತು ಅವರ ಪಾಲಕರ ಪ್ರತಿಕ್ರಿಯೆ ಈಗ ಹೇಗಿರಬಹುದು ಎಂಬುದನ್ನು ಊಹಿಸಿ ಮೀಮ್ಸ್ಗಳ ಮೂಲಕ ನೆಟ್ಟಿಗರು ವರ್ಣಿಸಿದ್ದು ಅದರ ಝಲಕ್ ಅನ್ನು ನೀವಿಲ್ಲಿ ಕಾಣಬಹುದಾಗಿದೆ. ಅಚ್ಚರಿಯೆಂದರೆ ಪಬ್ಜಿ ಬ್ಯಾನ್ ಮಾಡಿದ ಬೆನ್ನಲ್ಲೇ ಟ್ವಿಟರ್ನಲ್ಲಿ ನಂಬರ್ ಒನ್ ಟ್ರೆಂಡಿಂಗ್ನಲ್ಲಿದೆ.
ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ ಹಾಗೂ ಭಾರತದ ಸುರಕ್ಷತೆ ಮತ್ತು ಭದ್ರತಾ ದೃಷ್ಟಿಯಿಂದ ಪಬ್ಜಿ ಸೇರಿದಂತೆ 118 ಆ್ಯಪ್ಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಬುಧವಾರ ಸಂಜೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತು.
ಈ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ನೀಡಿ, ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಮೊಬೈಲ್ ಗೇಮ್ ಅನ್ನು ಬ್ಯಾನ್ ಮಾಡಲಾಗಿದೆ. ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ, ದೇಶದ ಸುರಕ್ಷತೆ ಹಾಗೂ ರಾಜ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಭದ್ರತೆಯೆಡೆಗೆ ಈ ಗೇಮ್ನಲ್ಲಿ ಪೂರ್ವಾಗ್ರಹ ಪೀಡಿತ ಚಟುವಟಿಕೆಗಳು ಇರುವುದರಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ಕೋಟ್ಯಾಂತರ ಭಾರತೀಯ ಮೊಬೈಲ್ ಮತ್ತು ಅಂತರ್ಜಾಲ ಬಳಕೆದಾರರ ಸುರಕ್ಷತೆ ಮತ್ತು ಹಿತಾಸಕ್ತಿಯ ದೃಷ್ಟಿಯಿಂದಲೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಅಂದಹಾಗೆ ಬ್ಯಾನ್ ಆಗಿರುವ ಪಬ್ಜಿ ಗೇಮ್ಗೆ ಭಾರತದಲ್ಲಿ 33 ಮಿಲಿಯನ್ ಬಳಕೆದಾರರು ಇದ್ದರು. ಅಲ್ಲದೆ, ಇದರಿಂದ ಭಾರಿ ಮೊತ್ತದ ಆದಾಯವೂ ಸಹ ಚೀನಾಗೆ ಹರಿದು ಹೋಗುತ್ತಿತ್ತು. ಇದೀಗ ಲಡಾಖ್ ಗಡಿಯಲ್ಲಿ ಚೀನಾ ಮತ್ತೆ ತನ್ನ ಕ್ಯಾತೆ ತೆಗೆದಿರುವುದರಿಂದ ಸರ್ಕಾರ ಸರಿಯಾದ ತಿರುಗೇಟು ನೀಡಿದೆ. ಈ ಮುಂಚೆಯೂ ಟಿಕ್ಟಾಕ್ ಸೇರಿದಂತೆ ಅನೇಕ ಚೀನಾ ಆ್ಯಪ್ಗಳನ್ನು ಸರ್ಕಾರ ಬ್ಯಾನ್ ಮಾಡಿದೆ. (ಏಜೆನ್ಸೀಸ್)