

ಬೆಂಗಳೂರು: ಪಬ್‌ಗೆ ನುಗ್ಗಿ 50 ಸಾವಿರ ರೂ. ದೋಚಿದ್ದ ಆರೋಪಿಯನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಒಡಿಶಾ ಮೂಲದ ದಿಲೀಪ್‌ಕುಮಾರ್ (29) ಬಂಧಿತ. ಮೇ 12ರ ಬೆಳಗಿನ ಜಾವ 1.30ರಲ್ಲಿ ಪಬ್ ಸೆಕ್ಯೂರಿಟಿ ಗಾರ್ಡ್ ವಿನಯ್ ಕುಮಾರ್‌ಗೆ ಬೆದರಿಸಿ ಹಣ ದೋಚಿದ್ದ. ಆರೋಪಿಯನ್ನು ಬಂಧಿಸಿ 6 ಸಾವಿರ ರೂ. ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2016ರಲ್ಲಿ ನೌಕರಿ ಅರಸಿ ಬೆಂಗಳೂರಿಗೆ ಬಂದಿದ್ದ ಆರೋಪಿ ಜಯನಗರ ಮತ್ತು ಜೆ.ಪಿ. ನಗರದ ಹೊಟೇಲ್, ಪಬ್ನಲ್ಲಿ ಕೆಲಸಕ್ಕೆ ಸೇರಿದ್ದ. ಹಣದಾಸೆಗೆ ಮನೆಯೊಂದರಲ್ಲಿ ಕಳ್ಳತನ ಮಾಡಿ 2021ರಲ್ಲಿ ಕೋರಮಂಗಲ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ.
ಜಾಮೀನು ಪಡೆದು ಹೊರಬಂದ ಆರೋಪಿ, ಜೀವನ ನಿರ್ವಹಣೆಗಾಗಿ ಜಯನಗರ ಸುತ್ತಮುತ್ತಲಿನ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದ. ಕಡಿಮೆ ಸಂಬಳ ಎಂದು ಕೆಲಸ ತೊರೆದು ಒಡಿಶಾಗೆ ಹೋಗಿದ್ದ. ನವೆಂಬರ್‌ನಲ್ಲಿ ನಗರಕ್ಕೆ ಬಂದು ಜೆ.ಪಿ. ನಗರದ ಹೊಟೇಲ್ನಲ್ಲಿ 4 ತಿಂಗಳು ಕೆಲಸ ಮಾಡಿ ಪುನಃ ಬಿಟ್ಟಿದ್ದ. ಹಣಕಾಸಿನ ಸಮಸ್ಯೆಗೆ ಒಳಗಾಗಿದ್ದ. ಮೇ 14ರಂದು ಸಹೋದರಿ ಮದುವೆ ನಿಗದಿಯಾಗಿತ್ತು. ಕೈಯಲ್ಲಿ ಹಣ ಇಲ್ಲದ ಕಾರಣಕ್ಕೆ ಮತ್ತೆ ಕಳ್ಳತನಕ್ಕೆ ಸಂಚು ರೂಪಿಸಿದ್ದ.
ಮೇ 12ರಂದು ಜಾಮಿಟ್ರಿ ಬ್ರಿವರಿ ಪಬ್ ಹಿಂಬಾಗಿಲು ಮೂಲಕ ಒಳನುಗ್ಗಿ 50 ಸಾವಿರ ರೂ. ನಗದು ದೋಚಿದ್ದ. ಸಹೋದರಿ ಮದುವೆ ಇದ್ದ ಕಾರಣಕ್ಕೆ ವಿಮಾನದಲ್ಲಿ ಒಡಿಶಾಗೆ ತೆರಳಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು, ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಒಡಿಶಾದ ಗಜಪತಿ ಜಿಲ್ಲೆ ಪರ್ಲೇಖೆಮಂಡಿ ಜಾಜ್‌ಪುರ್ ಗ್ರಾಮದಲ್ಲಿ ಇರುವುದು ಖಚಿತವಾಯಿತು. ಒಡಿಶಾಗೆ ಹೋಗಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿ ಕರೆತಂದಿದ್ದಾರೆ. ಪಿಸ್ತೂಲ್ ತೋರಿಸಿ ಬೆದರಿಸಿ ಕಳ್ಳತನ ಮಾಡಿರುವುದಾಗಿ ಭದ್ರತಾ ಸಿಬ್ಬಂದಿ ದೂರು ನೀಡಿದ್ದರು. ಆದರೆ, ಆರೋಪಿಯು ಪಿಸ್ತೂಲ್ ಬಳಸಿಲ್ಲ ಎಂಬುದು ವಿಚಾರಣೆ ವೇಳೆ ದೃಢವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.