

ಬೆಂಗಳೂರು: ಸ್ನೇಹಿತನ ಜತೆಗಿದ್ದ ಫೋಟೋ ಇಟ್ಟುಕೊಂಡು ಪಿಯು ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್ ಮಾಡಿ 75 ಗ್ರಾಂ ಚಿನ್ನಾಭರಣ, ನಗದು ಸುಲಿಗೆ ಮಾಡಿದ್ದ ಆರೋಪಿಯನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಸುಬ್ರಮಣ್ಯಪುರದ ನಾಯ್ಡು ಬಡಾವಣೆ ನಿವಾಸಿ ತೇಜಸ್ (19) ಬಂಧಿತ. ಸುಲಿಗೆ ಮಾಡಿದ್ದ 50 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆ ಚಿಕ್ಕಲ್ಲಸಂದ್ರದಲ್ಲಿ ಪಾಲಕರ ಜತೆಗೆ ವಾಸವಾಗಿದ್ದಾಳೆ. ಡೆಲಿವರಿ ಬಾಯ್ ಆಗಿದ್ದ ತೇಜಸ್, ಒಂದೇ ಏರಿಯಾದವನಾದ ಕಾರಣಕ್ಕೆ ಪರಿಚಯವಿದ್ದ. ಕಾಲೇಜಿಗೆ ಹೋಗುತ್ತಿದ್ದ ಯುವತಿ, ತನ್ನ ಸಹಪಾಠಿ ಜತೆಗೆ ಪೋಟೋಗಳನ್ನು ತೆಗೆಸಿಕೊಂಡಿದ್ದಳು. ಅದನ್ನು ತೇಜಸ್ ಕದ್ದು ಬ್ಲ್ಯಾಕ್‌ಮೇಲ್ ಶುರು ಮಾಡಿದ್ದ. ನಿನ್ನ ಪಾಲಕರಿಗೆ ೆಟೋ ತೋರಿಸಿ ಪ್ರೀತಿಸುವ ವಿಚಾರ ತಿಳಿಸುವುದಾಗಿ ಆರೋಪಿ ಬೆದರಿಸಿದ್ದ. ಮನೆಯವರಿಗೆ ಗೊತ್ತಾದರೆ ಕಾಲೇಜು ಬಿಡಿಸಿಬಿಡುತ್ತಾರೋ ಎಂಬ ಭಯಕ್ಕೆ ಯುವತಿ ತಿಳಿಸದಂತೆ ಗೋಗರೆಯುತ್ತಿದ್ದಳು. ಇದನ್ನೇ ದುರುಪಯೋಗ ಪಡಿಸಿಕೊಂಡ ತೇಜಸ್, ಹಣಕ್ಕೆ ಬೇಡಿಕೆ ಒಡ್ಡಿದ್ದ.
ಹೆದರಿದ ಸಂತ್ರಸ್ತೆ, ಮನೆಯಲ್ಲಿ ಪಾಲಕರ ಬಳಿ ಕದ್ದು 1.25 ಲಕ್ಷ ರೂ. ತಂದುಕೊಟ್ಟಿದ್ದಳು. ಹಣ ಸಿಗದೆ ಇದ್ದಾಗ ಆರೋಪಿ ಅಣತಿಯಂತೆ ಮನೆಯಲ್ಲಿದ್ದ 75 ಗ್ರಾಂ ಚಿನ್ನಾಭರಣವನ್ನು ಹಂತ- ಹಂತವಾಗಿ ಕದ್ದು ಕೊಟ್ಟಿದ್ದಳು. ಇತ್ತೀಚೆಗೆ ಯುವತಿ ತಾಯಿ ಸಂಬಂಧಿಕರ ಮದುವೆಗೆ ಹೋಗಲು ಕಬೋರ್ಡ್‌ನಲ್ಲಿದ್ದ ಚಿನ್ನಾಭರಣ ನೋಡಿದಾಗ ಇರಲಿಲ್ಲ. ಮಗಳ ಬಳಿ ಕೇಳಿದಾಗ ತೇಜಸ್‌ನ ಬ್ಲ್ಯಾಕ್‌ಮೇಲ್ ವೃತ್ತಾಂತ ವಿವರಿಸಿದ್ದಳು. ಯುವತಿ ತಾಯಿ ನೀಡಿದ ದೂರಿ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸುಬ್ರಮಣ್ಯಪುರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಗಿರವಿ ಇಟ್ಟಿದ್ದ ಅಂಗಡಿಯಲ್ಲಿ 50 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.