

ಶಿವಮೊಗ್ಗ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ.79.91 ಫಲಿತಾಂಶ ಲಭಿಸಿದೆ. ರಾಜ್ಯದಲ್ಲಿ 7ನೇ ಸ್ಥಾನ ಪಡೆದಿರುವ ಜಿಲ್ಲೆಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‌್ಯಾಂಕ್ ಪಡೆಯುವ ಮೂಲಕ ತೀರ್ಥಹಳ್ಳಿಯ ಆರ್.ದೀಕ್ಷಾ ಮೆರುಗು ತಂದಿದ್ದಾರೆ. ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳು ತಲಾ 594 ಅಂಕ ಪಡೆದು ಗಮನಸೆಳೆದಿದ್ದಾರೆ.
ತೀರ್ಥಹಳ್ಳಿಯ ಶಿಕ್ಷಕ ದಂಪತಿ ರಾಘವೇಂದ್ರ ಕಲ್ಕೂರು, ಉಷಾ ದಂಪತಿ ಪುತ್ರಿ ಆರ್.ದೀಕ್ಷಾ ಪ್ರಥಮ ರ‌್ಯಾಂಕ್ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ತೀರ್ಥಹಳ್ಳಿ ವಾಗ್ದೇವಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಈಕೆಗೆ ಮುಂದೆ ಇಂಜಿನಿಯರ್ ಆಗುವ ಹಂಬಲ.
ವಾಣಿಜ್ಯ ವಿಭಾಗದಲ್ಲಿ 594 ಅಂಕ ಪಡೆದ ಶಿವಮೊಗ್ಗ ಆಲ್ಕೊಳ ವಿಕಾಸ ಪಿಯು ಕಾಲೇಜಿನ ವಿದ್ಯಾರ್ಥಿ ಎಚ್.ಪಿ.ಪ್ರಜ್ವಲ್ ಈ ವಿಭಾಗದಲ್ಲಿ ಜಿಲ್ಲೆಗೆ ಮೊದಲಿಗನಾಗಿ ಹೊರಹೊಮ್ಮಿದ್ದಾನೆ. ಕಲಾ ವಿಭಾಗದಲ್ಲಿ ಡಿವಿಎಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಯೋವಿತಾ ಆಕಾಂಕ್ಷಾ 587 ಅಂಕ ಪಡೆದು ಈ ವಿಭಾಗದಲ್ಲಿ ಜಿಲ್ಲೆಗೆ ಮೊದಲಿಗಳಾಗಿ ಗಮನಸೆಳೆದಿದ್ದಾಳೆ. ಪೇಸ್ ಪಿಯು ಕಾಲೇಜಿನ ವಿದ್ಯಾರ್ಥಿ ಶೋಭಿತ್ ವಿಜ್ಞಾನ ವಿಭಾಗದಲ್ಲಿ 594 ಅಂಕ ಪಡೆದು ಪ್ರಜ್ವಲ್ ಜತೆ ಎರಡನೇ ಸ್ಥಾನ ಹಂಚಿಕೊಂಡಿದ್ದಾನೆ.
ಶಿವಮೊಗ್ಗ ಡಿವಿಎಸ್ ಕಾಲೇಜು ವಿದ್ಯಾರ್ಥಿಗಳಾದ ಗಣೇಶ್ ಮತ್ತು ಗೀತಾ ವಾಣಿಜ್ಯ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಗಮನಸೆಳೆದಿದ್ದಾರೆ. ಗಣೇಶ್ 403 ಅಂಕ ಪಡೆದರೆ, ಗೀತಾ 507 ಅಂಕ ಪಡೆದಿದ್ದಾಳೆ. ಇವರಿಬ್ಬರು ಸಹ್ಯಾದ್ರಿ ಕಾಲೇಜು ಬಳಿಯ ಬೈಪಾಸ್ ರಸ್ತೆ ಪಕ್ಕದ ಅಲೆಮಾರಿ ಕ್ಯಾಂಪಿನ ನಿವಾಸಿಗಳು. ಇವರ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.