

ಬೆಂಗಳೂರು: ಪಿಯುಸಿ ವಿಜ್ಞಾನ ವಿಷಯಗಳ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಮತ್ತು ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ತೊಂದರೆಯಾಗುತ್ತಿದ್ದು, ಮಧ್ಯಾಹ್ನ ಅವಧಿಯ ತರಬೇತಿಯನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘವು ಆಗ್ರಹಿಸಿದೆ.
ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿದೆ. 2024-25ನೇ ಸಾಲಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಬೆಳಗ್ಗೆ 9ರಿಂದ 10.15ರವರೆಗೆ ಹಾಗೂ ಸಂಜೆ 3ರಿಂದ 4.15ರವರೆಗೆ ಸ್ಪಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ವಿಷಯ ಬೋಧಕರನ್ನು ನಿಯೋಜಿಸಲಾಗಿದೆ. ಆದರೆ, ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಆಯ್ಕೆಯಾಗದ ಕಾರಣ ಆಯ್ಕೆಯಾಗದ ವಿದ್ಯಾರ್ಥಿಗಳಿಗೆ ಆಯಾ ವಿಷಯದ ಬೋಧನೆ ನಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಜ್ಞಾನ ವಿಷಯ ಬೋಧನೆಗೆ ಪ್ರತಿ 4ರಂತೆ ವಾರದಲ್ಲಿ 24 ಗಂಟೆಗಳು ಮಾತ್ರ ಲಭ್ಯವಾಗಲಿದೆ. ಇದರಿಂದ ಪಠ್ಯಕ್ರಮವನ್ನು ಮತ್ತು ಪ್ರಾಯೋಗಿಕ ತರಬೇತಿಯನ್ನು ಪೂರ್ಣ ಪ್ರಮಾಣದಲ್ಲಿ ಮುಗಿಸಲು ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ ಬೆಳಗ್ಗೆ ಬೇಗ ಕಾಲೇಜಿಗೆ ಬರಬೇಕಾಗಿರುವುದರಿಂದ ಮತ್ತು ಸಂಜೆ 4.15ರವರೆಗೆ ಆನ್‌ಲೈನ್ ತರಬೇತಿ ಇರುವುದರಿಂದ ವಿದ್ಯಾರ್ಥಿನಿಯರು ಮನೆಗೆ ತೆರಳುತ್ತಿರುವುದು ವಿಳಂಬವಾಗುತ್ತಿದೆ. ಇದರಿಂದ ಪಾಲಕರು ಆಯಾ ಕಾಲೇಜಿನ ಪ್ರಾಚಾರ್ಯರಿಗೆ ಪತ್ರ ಬರೆದು ಮಕ್ಕಳಿಗೆ ಆನ್‌ಲೈನ್ ತರಗತಿ ಬೇಡವೆಂದು ಹೇಳುತ್ತಿದ್ದಾರೆ.
ಆದ್ದರಿಂದ ಮಧ್ಯಾಹ್ನದ ಅವಧಿಯ ತರಬೇತಿಯನ್ನು ರದ್ದುಗೊಳಿಸಿ ವಿಶೇಷ ತರಗತಿಗಳ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಲು ಮತ್ತು ಪ್ರಾಯೋಗಿಕ ತರಗತಿಗಳನ್ನು ನಡೆಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಕಿರು ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿ ತರಬೇತಿಯನ್ನು ಮುಂದೂಡುವುದು ಮತ್ತು ವಾರ್ಷಿಕ ಪರೀಕ್ಷೆಗಳು ಮುಕ್ತಾಯವಾದ ನಂತರ ತರಬೇತಿ ಮುಂದುವರಿಸುವಂತೆ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಒತ್ತಾಯಿಸಿದ್ದಾರೆ.