

ಸಾಗರ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ನವೆಂಬರ್‌ನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಅತ್ಯಂತ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಗಮನ ಹರಿಸಲಾಗಿದೆ. ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಕಾಲೇಜಿಗೆ ಸುಣ್ಣ-ಬಣ್ಣ, ಶೌಚಗೃಹ, ಟೈಲ್ಸ್ ಅಳವಡಿಕೆ, ಮುಂಭಾಗದಲ್ಲಿ ದೊಡ್ಡ ನಾಮಲಕ, ಕೊಠಡಿಗಳ ದುರಸ್ತಿ, ಸಭಾಭವನ ನಿರ್ಮಾಣ ಹೀಗೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಮಳೆಗಾಲ ಇರುವುದರಿಂದ ಸದ್ಯ ಸುವರ್ಣ ಮಹೋತ್ಸವ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಮೂಲ ಸೌಲಭ್ಯ ಕಲ್ಪಿಸಿದ ನಂತರ ನವೆಂಬರ್‌ನಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದರು.
ಈ ಕಾಲೇಜಿನಲ್ಲಿ ನಾನು ಓದಿದ್ದೇನೆ. ಇದೊಂದು ಸ್ಮರಣೀಯ ಕಾರ್ಯಕ್ರಮ ಆಗಬೇಕು. ಈ ಕಾಲೇಜಿನಲ್ಲಿ ಓದಿರುವ ಎಲ್ಲರನ್ನೂ ಒಂದೆಡೆ ಸೇರಿಸಿ ಅಗತ್ಯ ಸಲಹೆ ಸಹಕಾರ ಪಡೆಯಲಾಗುತ್ತದೆ. ಕಾಲೇಜಿನ ಹಳೆಯ ವಿದ್ಯಾರ್ಥಿ ಜತೆಗೆ ವಿವಿಧ ಸಂಘ ಸಂಸ್ಥೆಗಳನ್ನು ಪರಿಗಣಿಸಲಾಗುವುದು. ಕಾರ್ಯಕ್ರಮಕ್ಕೆ ಈಗಿನಿಂದಲೇ ಸಿದ್ಧತೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎ.ಇಂದೂಧರ, ಪ್ರಾಚಾರ್ಯ ಸತ್ಯನಾರಾಯಣ, ಕಲಸೆ ಚಂದ್ರಪ್ಪ, ಬಸವರಾಜ್, ಭವ್ಯಾ, ಉಮೇಶ್ ಇತರರಿದ್ದರು.