ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಪಿಯು ಮೌಲ್ಯಮಾಪನ; ವಿಕೇಂದ್ರೀಕರಣ ನಿರ್ಧಾರ

City 9 PUC Board
Published on

ಬೆಂಗಳೂರು: ಉಪನ್ಯಾಸಕರು, ವಿಧಾನ ಪರಿಷತ್ ಸದಸ್ಯರ ಒತ್ತಾಯದ ಮೇರೆಗೆ ಕೊನೆಗೂ ಪದವಿಪೂರ್ವ ಶಿಕ್ಷಣ ಇಲಾಖೆ ಮೌಲ್ಯಮಾಪನ ವಿಕೇಂದ್ರೀಕರಣಗೊಳಿಸಲು ನಿರ್ಧರಿಸಿದೆ.

ಜೂ.18ಕ್ಕೆ ನಡೆಯಲಿರುವ ಆಂಗ್ಲ ಭಾಷಾ ಪರೀಕ್ಷೆಯ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ತೆರೆದಿದೆ. ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲಾ ಕೇಂದ್ರಗಳಿಂದ ಹೊರ ಜಿಲ್ಲೆಗಳಿಗೆ ಬಂದು ಮೌಲ್ಯಮಾಪನ ಮಾಡಲು ಮೌಲ್ಯಮಾಪಕರು ಹಿಂಜರಿಯುತ್ತಿದ್ದರು. ಉಪನ್ಯಾಸಕರು, ವಿಧಾನ ಪರಿಷತ್ ಸದಸ್ಯರು ಮೌಲ್ಯಮಾಪನ ಕೇಂದ್ರಗಳನ್ನು ಜಿಲ್ಲಾ ಕೇಂದ್ರಗಳಲ್ಲೇ ತೆರೆಯುವಂತೆ ಕೋರಿದ್ದರು. ಹೀಗಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ರಾಜ್ಯಾದ್ಯಂತ 32 ಪರೀಕ್ಷಾ ಶಿಬಿರಗಳನ್ನು ತೆರೆದಿದೆ. ಹೀಗಾಗಿ ಇಷ್ಟು ದಿನ ಅಂಚೆ ಮೂಲಕ ಕಳುಹಿಸಲಾಗುತ್ತಿದ್ದ ಉತ್ತರಪತ್ರಿಕೆಗಳನ್ನು ಖುದ್ದಾಗಿ ಆಯಾ ಜಿಲ್ಲಾ ಉಪನಿರ್ದೇಶಕರಿಗೆ ನೀಡುವಂತೆ ಇಲಾಖೆ ಸೂಚಿಸಿದೆ.

ಪರೀಕ್ಷೆ ಮುಗಿದ ಬಳಿಕ ಉತ್ತರಪತ್ರಿಕೆಗಳನ್ನು ಅಂಚೆ ಮೂಲಕ ಕಳುಹಿಸುವಂತಿಲ್ಲ. ಬದಲಾಗಿ ವಾಹನದ ವ್ಯವಸ್ಥೆ ಮಾಡಿ ಜಿಲ್ಲಾ ಉಪನಿರ್ದೇಶಕರಿಗೆ ಕಳುಹಿಸಬೇಕು. ಅವರು ಈಗಾಗಲೇ ಗುರುತಿಸಲ್ಪಟ್ಟ ಮೌಲ್ಯಮಾಪನ ಕೇಂದ್ರಗಳಿಗೆ ಅದನ್ನು ವಾಹನದ ಮೂಲಕ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಬೈಕ್ ಬಳಸಬಾರದು. ಒಂದು ವೇಳೆ ತಡವಾದರೆ ಸಿಸಿಟಿವಿ ಕ್ಯಾಮರಾ ಇರುವ ಕೊಠಡಿಯಲ್ಲಿ ಉತ್ತರಪತ್ರಿಕೆಗಳನ್ನು ಇಡಬೇಕು. ಒಂದು ಬಂಡಲ್​ನಲ್ಲಿ ಗರಿಷ್ಠ 14 ಲಕೋಟೆಗಳನ್ನಷ್ಟೇ ತುಂಬಿಸಬೇಕು. ಈ ಎಲ್ಲ ಪ್ರಕ್ರಿಯೆ ವೇಳೆ ಭದ್ರತೆಗಾಗಿ ಪೊಲೀಸರ ಸಹಾಯ ಪಡೆಯಬಹುದು. ಮೌಲ್ಯಮಾಪನ ಕೇಂದ್ರದ ಶಿಬಿರಾಧಿಕಾರಿಗಳು ಉತ್ತರಪತ್ರಿಕೆ ಬಂಡಲ್​ಗಳನ್ನು ಜಿಲ್ಲಾ ಉಪನಿರ್ದೇಶಕರಿಂದ ಸ್ವೀಕರಿಸುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು. ಇಲಾಖೆಯ ಸುತ್ತೋಲೆಗಳು ಆದೇಶಗಳು ಮತ್ತು ಸ್ಥಾಯಿ ಸೂಚನೆಗಳಲ್ಲಿ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net